SC/ST/OBCಗಳಿಗೆ ಜನಸಂಖ್ಯೆ ಆಧಾರಿತ ಹಂಚಿಕೆ ಆಗ್ರಹ; ಕ್ರಮ ಕೈಗೊಳ್ಳದಿದ್ದರೆ ಹಂತ ಹಂತವಾಗಿ ಹೋರಾಟ
ಯಾದಗಿರಿ ಮಾ ೨೩: ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಹಿಂದುಳಿದ ವರ್ಗಗಳ (OBC) ಸಾಮಾಜಿಕ ನ್ಯಾಯ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಂಭೀರತೆ ತೋರಿಸದಿರುವುದು ಆತಂಕಕಾರಿ ಬೆಳವಣಿಗೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತೀವ್ರವಾಗಿ ಆಕ್ಷೇಪಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 56% ಜನರು ಈ ವರ್ಗಗಳಿಗೆ ಸೇರಿದವರಾಗಿದ್ದು, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅವರಿಗೆ ಸಮರ್ಪಕ ಪ್ರತಿನಿಧಿತ್ವ ದೊರೆಯುತ್ತಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ದೊರೆತಿದ್ದು 78 ವರ್ಷಗಳಾದರೂ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಸ್ಥಿತಿ ಸಂಪೂರ್ಣವಾಗಿ ಸುಧಾರಿಸಿಲ್ಲ. ಸಂವಿಧಾನದ ಕಲಂ 340ರಡಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ವ್ಯವಸ್ಥೆ ಇದ್ದರೂ, ಅದರ ಅನುಷ್ಠಾನದಲ್ಲಿ ಹಲವು ಅಡೆತಡೆಗಳು ಎದುರಾಗುತ್ತಿವೆ. 2019ರಲ್ಲಿ ಸಂವಿಧಾನದ 342A ಕಲಂ ಮೂಲಕ OBCಗಳಿಗೆ ಸಂಬಂಧಿಸಿದ ತಿದ್ದುಪಡಿ ತರಲಾದರೂ, ನೆಲಮಟ್ಟದಲ್ಲಿ ಅದರ ಲಾಭ ಸಂಪೂರ್ಣವಾಗಿ ತಲುಪಿಲ್ಲ ಎಂದು ಉಗ್ರಪ್ಪ ಅಭಿಪ್ರಾಯಪಟ್ಟರು.
ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ವರದಿ ಆಧಾರವಾಗಿ ರಾಜ್ಯದಲ್ಲಿ ತರಲಾದ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಕ್ರಮಣಿಕೆಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಮುಂದಾಗದೇ ಇರುವುದನ್ನು ಅವರು ಖಂಡಿಸಿದರು. ಈ ಕಾಯ್ದೆ ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದ್ದು, ರಾಜ್ಯಪಾಲರ ಅನುಮೋದನೆಯೂ ದೊರೆತಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಇದನ್ನು ಅನುಕ್ರಮಣಿಕೆಯಲ್ಲಿ ಸೇರಿಸದೇ ಇರುವುದರಿಂದ ನ್ಯಾಯಾಲಯಗಳಲ್ಲಿ ಸವಾಲು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಇಂದ್ರಾ ಸಾಹ್ನೇ ಪ್ರಕರಣದಲ್ಲಿ 50% ಮೀಸಲಾತಿ ಮಿತಿ ಉಲ್ಲೇಖಿಸಿದ್ದರೂ, ಅಗತ್ಯವಾದ ಪ್ರಮಾಣಿಕ ಮಾಹಿತಿಯ ಆಧಾರದ ಮೇಲೆ ಆ ಮಿತಿಯನ್ನು ಮೀರಬಹುದೆಂಬ ಅವಕಾಶವೂ ಇದೆ. ತಮಿಳುನಾಡು ರಾಜ್ಯದಲ್ಲಿ 69% ಮೀಸಲಾತಿ ಜಾರಿಯಲ್ಲಿರುವುದು ಇದಕ್ಕೆ ಉದಾಹರಣೆ ಎಂದು ಉಗ್ರಪ್ಪ ಹೇಳಿದರು. ಆದ್ದರಿಂದ, ಕರ್ನಾಟಕದಲ್ಲಿಯೂ ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೊಳಿಸಲು ಸರ್ಕಾರಗಳು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೇವಲ ಕೇಂದ್ರಕ್ಕೆ ಪತ್ರ ಬರೆಯುವುದರ ಮೂಲಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ತಕ್ಷಣ ಎಲ್ಲಾ ಪಕ್ಷಗಳ ಸಭೆ ಕರೆಯಬೇಕು, ದೆಹಲಿಗೆ ಪ್ರತಿನಿಧಿ ಮಂಡಳಿ ಕಳುಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು. ಅಲ್ಲದೇ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಸ್ಥಗಿತ ಆದೇಶಗಳನ್ನು ತೆರವುಗೊಳಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ, ಆಯ್ಕೆಯಾದ ಸಂಸದರು, ಶಾಸಕರು ಹಾಗೂ ಮಂತ್ರಿಗಳು ತಮ್ಮ ಸಮುದಾಯದ ಹಿತಾಸಕ್ತಿಗಾಗಿ ಧ್ವನಿ ಎತ್ತದಿರುವುದನ್ನು ಅವರು ಟೀಕಿಸಿದರು. ಜನರು ಮತ ನೀಡಿ ಅಧಿಕಾರಕ್ಕೆ ತಂದ ಪ್ರತಿನಿಧಿಗಳು ಸಂಕಷ್ಟದ ಸಂದರ್ಭದಲ್ಲಿ ಮೌನ ವಹಿಸುವುದು ಸರಿಯಲ್ಲ. ಸಾಮಾಜಿಕ ನ್ಯಾಯದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.
ಮೀಸಲಾತಿ ಎಂಬುದು ಯಾರಿಗೂ ದಾನವಲ್ಲ, ಅದು ಸಂವಿಧಾನ ನೀಡಿದ ಹಕ್ಕು. ಯಾವುದೇ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲ, ಪ್ರತಿಯೊಬ್ಬರಿಗೂ ಅವರ ಪಾಲಿನ ನ್ಯಾಯ ದೊರೆಯಬೇಕು ಎಂಬುದೇ ನಮ್ಮ ಹೋರಾಟದ ಉದ್ದೇಶ ಎಂದು ಉಗ್ರಪ್ಪ ಸ್ಪಷ್ಟಪಡಿಸಿದರು.
ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು. ಮೊದಲಿಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾಜದ ಎಲ್ಲ ವರ್ಗದ ಜನರು ಜಾಗೃತರಾಗಬೇಕು, ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡಬೇಕು. ಯುವಕರು ಹಾಗೂ ಶಿಕ್ಷಣ ಪಡೆದ ವರ್ಗಗಳು ಮುಂದಾಳತ್ವ ವಹಿಸಬೇಕು. ಸಾಮಾಜಿಕ ನ್ಯಾಯ ಸಾಧನೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಸಮಾನತೆ ಸಾಧಿಸಬಹುದು ಎಂದು ಉಗ್ರಪ್ಪ ಅಭಿಪ್ರಾಯಪಟ್ಟರು.

