ಯಾದಗಿರಿ ನ ೦೬: – ಸರ್ಕಾರದಿಂದ ಪಡಿತರ ವಿತರಕರಿಗೆ ನೀಡಬೇಕಾದ ಕಮಿಷನ್ ಮೊತ್ತವನ್ನು ಆರು ತಿಂಗಳಿನಿಂದ ಬಿಡುಗಡೆ ಮಾಡದಿರುವ ಹಿನ್ನೆಲೆಯಲ್ಲಿ, ಯಾದಗಿರಿ ಜಿಲ್ಲೆಯ ಪಡಿತರ ವಿತರಕರ ಸಂಘವು ನವೆಂಬರ್ ತಿಂಗಳ ಪಡಿತರ ಎತ್ತುವಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದೆ.
ಇಂದು ಯಾದಗಿರಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಸರಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ನಿರ್ದೇಶಕರಾದ ಆರ್. ಮಹಾದೇವಪ್ಪ ಮಾತನಾಡಿದರು. ಅವರು ಹೇಳಿದರು — “ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸರ್ಕಾರದ ವಿವಿಧ ಹಂತಗಳಲ್ಲಿ ಮನವಿಗಳು ಸಲ್ಲಿಸಲಾದರೂ, ಕಮಿಷನ್ ಬಿಡುಗಡೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಆಹಾರ ಸಚಿವರು, ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಪ್ರತಿಕ್ರಿಯೆ ವಿಳಂಬವಾಗುತ್ತಿದೆ” ಎಂದರು.ಮಹಾದೇವಪ್ಪ ತಿಳಿಸಿದ್ದಾರೆ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಕಮಿಷನ್ ಮೊತ್ತವನ್ನು ಸರ್ಕಾರ ಜಿಲ್ಲಾ ಪಂಚಾಯಿತಿಗಳಿಗೆ ವರ್ಗಾಯಿಸಿದರೂ, ಇಲಾಖೆಯ ಜಂಟಿ ನಿರ್ದೇಶಕರು ಅಥವಾ ಉಪ ನಿರ್ದೇಶಕರ ಕಡೆಯಿಂದ ಯಾವುದೇ ಅನುಮೋದನಾ ಪತ್ರ ಹೊರಬಂದಿಲ್ಲ. ಇದರ ಪರಿಣಾಮವಾಗಿ ಹಣ ಪಡಿತರ ವಿತರಕರಿಗೆ ತಲುಪಿಲ್ಲ. ಜೊತೆಗೆ ಎನ್ಎಫ್ಎಸ್ ಯೋಜನೆಯಡಿ ನಾಲ್ಕು ತಿಂಗಳ ಕಾಲ ಕೇಂದ್ರದ ಕಮಿಷನ್ ಕೇವಲ ಅಕ್ಕಿಗೆ ಮಾತ್ರ ಬಿಡುಗಡೆಗೊಂಡಿದ್ದು, ರಾಗಿ ಮತ್ತು ಜೋಳಕ್ಕೆ ಸಂಬಂಧಿಸಿದ ಕಮಿಷನ್ ಇನ್ನೂ ಬಾಕಿಯಾಗಿದೆ ಎಂದು ಹೇಳಿದರು.
“ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರು ಮೈಸೂರು ಮತ್ತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಆಹಾರ ಸಚಿವ ಮುನಿಯಪ್ಪರನ್ನು ಭೇಟಿಯಾಗಿ ವಿಷಯ ತಿಳಿಸಿದರು. ಆದರೆ ಸರ್ಕಾರದ ನಿರ್ಲಕ್ಷ್ಯ ಮನೋಭಾವ ಮುಂದುವರಿದಿದೆ. ಆದ್ದರಿಂದ ನಮ್ಮ ಸಂಘದ ನಿರ್ಧಾರ ಸ್ಪಷ್ಟ — ನವೆಂಬರ್ ತಿಂಗಳ ಪಡಿತರ ಎತ್ತುವಳಿಯನ್ನು ಎಲ್ಲಾ ವಿತರಕರು ಮಾಡದೆ, ಸರ್ಕಾರ ಕ್ರಮ ಕೈಗೊಳ್ಳುವವರೆಗೂ ನಿರ್ಧಾರ ಹಿಂಪಡೆಯುವುದಿಲ್ಲ,” ಎಂದು ಎಚ್ಚರಿಸಿದರು.
ಮಹಾದೇವಪ್ಪ ಅವರು ರಾಜ್ಯ ಸರ್ಕಾರಕ್ಕೆ ತುರ್ತು ಕ್ರಮ ಕೈಗೊಳ್ಳಿ, ವಿತರಕರ ಕಮಿಷನ್ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.

