ಧಾರವಾಡ ಅ ೧೩: ರಂಗಾಯಣ ನಿರ್ದೇಶಕ ಹಾಗೂ ಖ್ಯಾತ ಹಿರಿಯ ರಂಗಭೂಮಿ ಕಲಾವಿದ, ಹಾಸ್ಯನಟ ರಾಜು ತಾಳಿಕೋಟಿ (Actor Raju Talikote) ಅವರು ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಭಾನುವಾರ ರಾತ್ರಿ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಂಜೆ ಅವರು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ ಸಲುವಾಗಿ ರಾಜು ತಾಳಿಕೋಟಿ ಉಡುಪಿಗೆ ತೆರಳಿದ್ದರು. ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯಕೀಯ ಚಿಕಿತ್ಸೆಯಾದರೂ ಅವರು ಬದುಕುಳಿಯಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಮೊದಲು ಕೂಡ ರಾಜು ತಾಳಿಕೋಟಿಗೆ ಹೃದಯಾಘಾತ ಆಗಿದ್ದ ಹಿನ್ನೆಲೆ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹಾಗೂ ಆರೋಗ್ಯದ ಸಮಸ್ಯೆ ಹೆಚ್ಚಾಗಿದ್ದ ಕಾರಣದಿಂದ ಮತ್ತೊಮ್ಮೆ ಹೃದಯಾಘಾತ ಸಂಭವಿಸಿರುವುದಾಗಿ ಕುಟುಂಬದವರು ಹೇಳಿದ್ದಾರೆ. ಅವರ ಅಂತ್ಯಕ್ರಿಯೆ ವಿಜಯಪುರದಲ್ಲಿ ನೆರವೇರಲಿದೆ ಎಂದು ಪುತ್ರರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ರಾಜು ತಾಳಿಕೋಟಿ ನಂತರ ತಾಳಿಕೋಟೆ ನಗರದಲ್ಲಿ ನೆಲೆಸಿದ್ದರು. ಅವರ ಪೂರ್ಣ ಹೆಸರು ರಾಜೇಸಾಬ ಮಕ್ತುಮಸಾಬ ತಾಳಿಕೋಟಿ. ಅವರು ಕೇವಲ ನಟನಾಗಿರದೇ, ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.
ರಾಜು ತಾಳಿಕೋಟಿಯವರು ರಂಗಭೂಮಿಯ ಜಗತ್ತಿನಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದರು. ಹಲವು ನಾಟಕಗಳಲ್ಲಿ ಅವರು ಅಭಿನಯಿಸಿ ಜನಮನ ಗೆದ್ದಿದ್ದರು. ವಿಶೇಷವಾಗಿ ಕುಡುಕರ ಜೀವನವನ್ನು ಹಾಸ್ಯ ರೂಪದಲ್ಲಿ ಚಿತ್ರಿಸಿರುವ “ಕಲಿಯುಗದ ಕುಡುಕ” ನಾಟಕದ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದಿದ್ದರು. ಅವರ ಹಾಸ್ಯ ಶೈಲಿ ಪ್ರೇಕ್ಷಕರಲ್ಲಿ ನಗೆ ತರಿಸಿತು, ಅವರ ಸಂಭಾಷಣೆಗಳು ಗ್ರಾಮೀಣ ಭಾಷೆಯ ಸೊಗಡನ್ನು ಒಳಗೊಂಡಿದ್ದವು.
ಚಿತ್ರರಂಗದಲ್ಲಿಯೂ ಅವರು ಸಮಾನ ಯಶಸ್ಸು ಗಳಿಸಿದರು. ನಿರ್ದೇಶಕ ಆನಂದ್ ಪಿ. ರಾಜು ಅವರ “ಹೆಂಡ್ತಿ ಅಂದ್ರೆ ಹೆಂಡ್ತಿ” ಚಿತ್ರದಿಂದ ಸಿನಿಮಾ ಲೋಕಕ್ಕೆ ಪ್ರವೇಶಿಸಿದ ಅವರು, ನಂತರ ಯೋಗರಾಜ್ ಭಟ್ ನಿರ್ದೇಶನದ “ಮನಸಾರೆ” (2009) ಚಿತ್ರದ ಮೂಲಕ ವಿಶಿಷ್ಟ ಗುರುತಿನ ಸಾಧನೆ ಮಾಡಿದರು. ಬಳಿಕ “ಪಂಚರಂಗಿ”, “ಮತ್ತೊಂದ್ ಮದುವೇನಾ..!”, “ಮೈನಾ” ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯಿಂದ ಪ್ರೇಕ್ಷಕರ ಹೃದಯ ಗೆದ್ದರು.
ರಾಜು ತಾಳಿಕೋಟಿಯವರ ನಿಧನದಿಂದ ಕನ್ನಡ ಚಿತ್ರರಂಗ ಹಾಗೂ ರಂಗಭೂಮಿ ಲೋಕದ ಹಲವರು ಆಘಾತಗೊಂಡಿದ್ದಾರೆ. ಹಿರಿಯ ಕಲಾವಿದರು, ನಿರ್ದೇಶಕರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ರಂಗಭೂಮಿಯಿಂದ ಸಿನಿಮಾ ಲೋಕದವರೆಗೆ ತಮ್ಮ ಪ್ರತಿಭೆಯಿಂದ ಜನಮನ ಗೆದ್ದ ಕಲಾವಿದರ ಅಗಲಿಕೆ ಕನ್ನಡ ಕಲಾಜಗತ್ತಿಗೆ ತುಂಬಲಾರದ ನಷ್ಟವಾಗಿದೆ.

