ಯಾದಗಿರಿ ಸೆ.21: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಪ್ರತಿಯೊಬ್ಬರೂ ಸಂಪೂರ್ಣ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಕರೆ ನೀಡಿದ್ದಾರೆ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ರಾಜ್ಯದಾದ್ಯಂತ ಈ ಸಮೀಕ್ಷೆ ನಡೆಯಲಿದ್ದು, ಈ ಸಂದರ್ಭದಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. “ಗಣತಿದಾರರಿಗೆ ಅಗತ್ಯವಾದ ಮಾಹಿತಿಯನ್ನು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ಧರ್ಮದ ವಿವರ ದಾಖಲಿಸುವಾಗ ತಮ್ಮ ಧರ್ಮವನ್ನು ಸ್ಪಷ್ಟವಾಗಿ ನಮೂದಿಸಬೇಕು. ಜಾತಿ ದಾಖಲಿಸುವ ವೇಳೆ ತಮ್ಮ ನಿಜವಾದ ಜಾತಿ ವಿವರ ನೀಡುವುದು ಕಡ್ಡಾಯ” ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯವನ್ನು ಬಲಪಡಿಸಿ, ನಾಡಿನ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದಲೇ ಈ ಸಮೀಕ್ಷೆಯನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದ ಅವರು, “ಸಮಗ್ರ ಹಾಗೂ ನಿಖರವಾದ ಮಾಹಿತಿ ದೊರೆತರೆ ರಾಜ್ಯದಲ್ಲಿ ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಸಮಾಜದ ಕೊನೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ತಲುಪಲು ಈ ಸಮೀಕ್ಷೆ ನೆರವಾಗಲಿದೆ” ಎಂದರು.
“ಜನರು ಈ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ಮಾಹಿತಿ ನೀಡಿ ಸಹಕರಿಸಿದರೆ ಮಾತ್ರ ಸರ್ಕಾರದ ಉದ್ದೇಶ ಸಫಲವಾಗಲಿದೆ” ಎಂದು ಡಾ. ಮೇಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

