Tue. Jul 22nd, 2025

ಭ್ರೂಣ ಹತ್ಯೆ ಕುರಿತು ಸ್ಫೋಟ ಮಾಹಿತಿಗಳ ಬಿಚ್ಚಿಟ್ಟ ನರ್ಸ್ ಮಂಜುಳಾ

ಭ್ರೂಣ ಹತ್ಯೆ ಕುರಿತು ಸ್ಫೋಟ ಮಾಹಿತಿಗಳ ಬಿಚ್ಚಿಟ್ಟ ನರ್ಸ್ ಮಂಜುಳಾ

ಡಿ ೦೨

: ಭ್ರೂಣ ಹತ್ಯೆ ಕುರಿತ ಸ್ಫೋಟಕ ಮಾಹಿತಿಗಳನ್ನು ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ ಪೊಲೀಸರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡಿದ್ದೇನೆ ಹಾಗೂ 6 ತಿಂಗಳ ಮಗುವನ್ನೂ ಹೊರೆತೆಗೆದಿದ್ದೇನೆಂದು ತಪ್ಪೊಪ್ಪಿಕೊಂಡಿದ್ದಾಳೆ.

ಮೈಸೂರು ಭ್ರೂಣ ಹತ್ಯೆ ಪ್ರಕರಣದಲ್ಲಿ ಪೊಲೀಸರು ನರ್ಸ್ ಮಂಜುಳಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿಯನ್ನು ಆಕೆ ಬಹಿರಂಗಪಡಿಸಿದ್ದಾಳೆ.

ತಿಂಗಳಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ.

  • ಆ ಮಕ್ಕಳಿಗೆ ಜೀವ ಇರುತ್ತಿತ್ತು.
  • 6 ತಿಂಗಳ ಮಗುವಿಗೆ ಧ್ವನಿ ಇರುವುದಿಲ್ಲ.
  • ಮಗು ಹೊರಗೆ ತೆಗೆದ 5 ರಿಂದ 10 ನಿಮಿಷದಲ್ಲಿ ಸಾಯುತ್ತಿದ್ದವು.
  • ಅದನ್ನು ಪೇಪರ್‌ನಲ್ಲಿ ಸುತ್ತಿ ನಿಸಾರ್‌ಗೆ ಕೊಡುತ್ತಿದ್ದೆ.
  • ನಿಸಾರ್ ಆ ಮಗುವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಗೆ ಬಿಸಾಕಿ ಬರುತ್ತಿದ್ದ.
  • 12 ವಾರ ಕಳೆದ ಮಕ್ಕಳನ್ನು ಅಬಾರ್ಟ್ ಮಾಡಿ ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು.
  • 4 ದಿನಕ್ಕೆ ಮೆಡಿಕಲ್ ವೇಸ್ಟ್ ಅಲ್ಲಿ ಮಗು ಕೊಳೆತು ಹೋಗುತ್ತಿತ್ತು ಎಂದು ಹೇಳಿದ್ದಾಳೆ.

ಕಳೆದೊಂದು ವರ್ಷದಿಂದ ನಾನು ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡಿದ್ದೇನೆ. ಈ ಮೊದಲು ರೀಸ್ಮಾ ಅಬಾರ್ಷನ್ ಮಾಡುವ ಕೆಲಸವನ್ನು ಮಾಡುತ್ತಿದ್ದಳು. ಅವಳಾದ ಬಳಿಕ ನಾನು ಮಗುವನ್ನು ಅಬಾರ್ಷನ್ ಮಾಡುವುದಕ್ಕೆ ಸೇರಿಕೊಂಡಿದ್ದೆ. 6 ತಿಂಗಳ ಮಗುವನ್ನು ನಾನು ಅಬಾರ್ಷನ್ ಮಾಡಿದ್ದೇನೆ.

ನಿಸಾರ್ ಮಗುವನ್ನು ಕಾವೇರಿ ನದಿಗೆ ಎಸೆದು ಬರುತ್ತಿದ್ದ. ಯಾವ ಜಾಗದಲ್ಲಿ ಆ ಮಗುವನ್ನು ಬಿಸಾಕುತ್ತಿದ್ದ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನದಿಯನ್ನು ಬಿಟ್ಟು ಬೇರೆ ಜಾಗದಲ್ಲಿ ಬಿಸಾಕಿದರೆ ಅವಷೇಶಗಳು ಸಿಕ್ಕಿಬಿಡುತ್ತದೆ. ಹೀಗಾಗಿ ನಿಸಾರ್ ಮಗುವನ್ನು ಬಿಸಾಕುವ ಕೆಲಸ ಮಾಡುತ್ತಿದ್ದ. ಭ್ರೂಣ ಹತ್ಯೆ ಮಾಡಿದ ಬಳಿಕ ತೀರಾ ರಕ್ತಸ್ರಾವ ಆಗುತ್ತಿತ್ತು. ಆಗ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆರು ತಿಂಗಳ ಮಗುವನ್ನು ಅಬಾರ್ಷನ್ ಮಾಡುವುದಕ್ಕೆ ಬೇರೆಯೇ ಕಾರಣ ಇತ್ತು. ನಮ್ಮ ಬಳಿ ಅಡ್ವಾನ್ಸ್ ಸ್ಕ್ಯಾನಿಂಗ್ ಮೆಷಿನ್ ಇರಲಿಲ್ಲ. ಕೆಲವೊಮ್ಮೆ ಹೆಣ್ಣು ಭ್ರೂಣನಾ? ಗಂಡು ಭ್ರೂಣನಾ ಎಂದು ಗೊತ್ತಾಗುತ್ತಿರಲಿಲ್ಲ. ಲಿಂಗ ಪತ್ತೆಯಾಗದೇ ಇದ್ದಾಗ ತಿಂಗಳು ಬಿಟ್ಟು ಬರೋದಕ್ಕೆ ಹೇಳುತ್ತಿದ್ದೆವು. ಹೀಗಾಗಿ ಮಗುವನ್ನು ಕಂಡು ಹಿಡಿಯಲು ತಡ ಆದಾಗ 6 ತಿಂಗಳ ಮಗುವನ್ನು ಅಬಾರ್ಷನ್ ಮಾಡಲಾಗುತ್ತಿತ್ತು.

6 ತಿಂಗಳ ಮಗು ಅಬಾರ್ಷನ್ ಮಾಡಲು ನಮ್ಮದೇ ಕಾರಣ ಇದೆ.

6 ತಿಂಗಳ ಮಗುವನ್ನು ಸಿಸೇರಿಯನ್ ಮೂಲಕ ಹೆರಿಗೆ ರೀತಿಯಲ್ಲಿ ಮಾಡುತ್ತಿದ್ದೆವು. ಸಿ ಸೆಕ್ಷನ್ ಮೂಲಕ ತೆಗೆದು ಟೇಬಲ್ ಮೇಲೆ ಇಡಲಾಗುತ್ತಿತ್ತು. 5 ರಿಂದ 10 ನಿಮಿಷಕ್ಕೆ ಆ ಮಗು ಸಾಯುತ್ತಿತ್ತು. ತಾಯಿಗೆ ಪ್ರಜ್ಞೆ ಇಲ್ಲದಂತೆ ಮಾಡಿ ಸಿ ಸೆಕ್ಷನ್ ಮಾಡಲಾಗುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರಿಗೆ ನೀಡಿದ್ದಾಳೆ.

ಇನ್ನು ಡಾಕ್ಟರ್ ಚಂದನ್ ಬಲ್ಲಾಳ್ ಪುರಾಣವನ್ನೂ ಪೊಲೀಸರು ಬಿಚ್ಚಿಟ್ಟಿದ್ದಾರೆ. ಅಸಲಿಗೆ ಚಂದನ್ ಬಲ್ಲಾಳ್ ಎಂಬಿಬಿಎಸ್ ಡಾಕ್ಟರ್ ಅಲ್ಲವೇ ಅಲ್ಲ. ಅವನು ಸ್ಕ್ಯಾನಿಂಗ್ ಮಾಡೋ ಪಾಠವನ್ನೇ ಕಲಿತಿರಲಿಲ್ಲ. ಚಂದನ್ ಬಲ್ಲಾಳ್ ಬಿಎಎಂಎಸ್ ಓದಿರುವ ಡಾಕ್ಟರ್. ಈತ ಕೇವಲ ಆಯುರ್ವೇದದ ಚಿಕಿತ್ಸೆಯನ್ನು ಮಾತ್ರ ಕೊಡಬೇಕಿತ್ತು. ನರ್ಸಿಂಗ್ ಹೋಂ ತೆಗೆಯೋದಕ್ಕೂ ಈತನಿಗೆ ವಿದ್ಯಾರ್ಹತೆ ಇಲ್ಲ. ಆದರೂ ನರ್ಸಿಂಗ್ ಹೋಂ ತೆಗೆದಿದ್ದ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಅಕ್ಟೋಬರ್​​ನಲ್ಲಿ ಭ್ರೂಣ ಹತ್ಯೆ ಸಂಬಂಧ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಬೃಹತ್ ಜಾಲ ಇರುವುದು ಪತ್ತೆಯಾಗಿದೆ. ಅದರಂತೆ ವೈದ್ಯರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಾಗ ಎರಡು ವರ್ಷಗಳಲ್ಲಿ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿದ ಆಘಾತಕಾರಿ ವಿಚಾರ ಬಹಿರಂಗವಾಗಿತ್ತು.

ಅಲ್ಲದೆ, ಮಂಡ್ಯ ಮೂಲದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಗಳಿಗೆ ಭ್ರೂಣ ಪತ್ತೆಗೆ ಬರುವವರ ಮಾಹಿತಿ ಕಲೆಹಾಕಿದ್ದರು. ಬಳಿಕ ಮಧ್ಯವರ್ತಿಗಳ ಸಹಾಯದಿಂದ ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿರುವ ಆಲೆಮನೆಗೆ ಗರ್ಭಿಣಿಯರನ್ನು ಕರೆಸಿಕೊಂಡು ಲಿಂಗ ಪತ್ತೆಮಾಡಿ ಹತ್ಯೆ ಮಾಡುತ್ತಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಇದೀಗ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!