ಯಾದಗಿರಿ ಜುಲೈ 20 :
ಜಿಲ್ಲೆಯಲ್ಲಿ ಈ ಬಾರಿಯೂ ಗಣಿತ, ವಿಜ್ಞಾನ ಸೇರಿದಂತೆ ಹಲವು ವಿಷಯಗಳಲ್ಲಿ ವಿದ್ಯಾರ್ಥಿಗಳು ಪೆದರಿಸಿದ್ದು, ಒಟ್ಟು 15036 ವಿದ್ಯಾರ್ಥಿಗಳಲ್ಲಿ ಕೇವಲ 7759 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಕುಸಿತದ ಕುರಿತು ತೀವ್ರ ಚಿಂತೆ ವ್ಯಕ್ತಪಡಿಸಿರುವ ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲೆಯಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಜೊತೆಗೆ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ನೀಡಿದ ಶಾಲೆಗಳಿಗೂ ಪ್ರತ್ಯೇಕ ನೋಟಿಸ್ ನೀಡಲಾಗಿದೆ.
ಅಧಿಕಾರಿಗಳ ಕ್ರಮಕ್ಕೆ ಶಿಕ್ಷಕರ ಸಂಘದ ಆಕ್ರೋಶ
ಈ ನೋಟಿಸ್‌ಗಳಿಗೆ ಶಿಕ್ಷಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಫಲಿತಾಂಶ ಕುಸಿತಕ್ಕೆ ಕೇವಲ ಶಿಕ್ಷಕರೇ ಹೊಣೆ ಎಂಬ ಮಾತು ಸೂಕ್ತವಲ್ಲ. ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಮತ್ತು ನಿರಂತರ ಆಡಳಿತ ವೈಫಲ್ಯದ ಫಲವೇ ಇಂಥ ಪರಿಸ್ಥಿತಿ” ಎಂಬ ಗಂಭೀರ ಅಭಿಪ್ರಾಯವನ್ನು ಸಂಘ ಹಂಚಿಕೊಂಡಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಶಾಲೆಗಳು ಒಂದೇ ಶಿಕ್ಷರರ ಅಡಿಯಲ್ಲಿ ನಡೆಯುತ್ತಿವೆ. ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ನಿರ್ದಿಷ್ಟ ಶಿಕ್ಷಕರೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳ ಪಠ್ಯ ಭದ್ರತೆ, ಪರೀಕ್ಷಾ ತಯಾರಿ ಎಲ್ಲವೂ ಸಂಕಟಕ್ಕೆ ಒಳಗಾಗಿದೆ.
ಉತ್ತಮ ವ್ಯವಸ್ಥೆಗಳೇ ಪರಿಹಾರ
ಅಧಿಕಾರಿಗಳು ಶಿಕ್ಷಕರಿಗೆ ನೋಟಿಸ್ ಕೊಡುವ ಬದಲು, ಜಿಲ್ಲೆಯ ಶಾಲೆಗಳಿಗೆ ಉತ್ತಮ ಮೂಲಸೌಕರ್ಯ, ಪರೀಕ್ಷಾ ತಯಾರಿ ಶಿಬಿರ, ಪ್ರೇರಣಾ ಕಾರ್ಯಕ್ರಮ, ಹಾಗೂ ಶಿಕ್ಷಕರ ಸಮರ್ಪಕ ನೇಮಕಾತಿಗೆ ಪ್ರಾಮುಖ್ಯತೆ ನೀಡಬೇಕೆಂಬುದು ಜಿಲ್ಲಾ ಶಿಕ್ಷಕರ ಸಮುದಾಯದ ಒಕ್ಕೊರಲ ಅಭಿಪ್ರಾಯವಾಗಿದೆ.
ಒಟ್ಟಾರೆ, ‘ಹಿಂದುಳಿದ ಜಿಲ್ಲೆ’ ಎಂಬ ಟ್ಯಾಗ್ ತೆಗೆದು ಹಾಕಬೇಕಾದರೆ, ಸರ್ಕಾರ ಶಾಲಾ ವ್ಯವಸ್ಥೆ ಸುಧಾರಿಸಲು ಗಂಭೀರ ಕ್ರಮ ಕೈಗೊಳ್ಳಲೇಬೇಕು.