ಯಾದಗಿರಿ, ಫೆ. 18:
ನಿನ್ನೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿಗಾರರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಅವು ಬಡ್ಡಿದರ, ಸಾಲಗಾರರ ಮಾಹಿತಿ, ಸುಸ್ಥಿ ಸಾಲಗಳ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕೆಂದು ಅವರು ಸೂಚಿಸಿದರು.
ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ನಿಯಮಗಳು
ಗ್ರಾಮ ಹಾಗೂ ಪಟ್ಟಣ ಮಟ್ಟದಲ್ಲಿ ಸಾಲ ವಸೂಲಾತಿಗಾಗಿ ನಿಯೋಜಿಸಿರುವ ಅಧಿಕಾರಿಗಳ ಪಟ್ಟಿ, ಸಾಲಗಾರರ ಹೆಸರು ಹಾಗೂ ವಿಳಾಸದೊಂದಿಗೆ ಲಿಖಿತ ಮುಚ್ಚಳಿಕೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವುದು ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದರು. ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿಗಾರರು ಪಾರದರ್ಶಕ ಬಡ್ಡಿದರ ನೀತಿ ಅನುಸರಿಸಬೇಕು ಮತ್ತು ಅದನ್ನು ತಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿದರು.
ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಕೆ. ಶಂಕರ ಅವರು ಮಾತನಾಡಿ, ಆರ್ಬಿಐ ನಿಯಮದಂತೆ ಸಾಲ ವಸೂಲಿ ನಡೆಯಬೇಕು ಎಂದು ಒತ್ತಿಹೇಳಿದರು. ನಿಯಮಬಾಹಿರವಾಗಿ ಜನರನ್ನು ಹಿಂಸಿಸುವ, ಕಿರುಕುಳ ನೀಡುವ ಕೃತ್ಯಗಳು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿಗಾರರಿಂದ ಅಧ್ಯಾದೇಶದ ಉಲ್ಲಂಘನೆಯಾದರೆ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಆರ್.ಬಿ.ಐ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿಗಾರರು RBI ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕಿ ಪವನ್ ಕುಮಾರ್, ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ಸುರಪೂರ ಮತ್ತು ಯಾದಗಿರಿಯ 23 ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.