ಯಾದಗಿರಿ ಆ ೦೭:
ಕ್ಷಣಕ್ಷಣಕ್ಕೂ ಒಳ ಹರಿವು ಹೆಚ್ಚುತ್ತಿರುವ ಕಾರಣ, ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದ್ದು, ನದಿ ಅಪಾಯ ಮಟ್ಟ ಮೀರಿಸಿದೆ. ಈ ನದಿಯ ತೀರದಲ್ಲಿರುವ ಯಾದಗಿರಿ ನಗರದ ಹೊರವಲಯದ ದೇವಸ್ಥಾನಗಳು ಮುಳುಗಡೆಯಾಗಿವೆ. ಭೀಮಾ ನದಿಯ ತೀರದ ವಿರಾಂಜನೇಯ ಮತ್ತು ಕಂಗಳೇಶ್ವರ ದೇವಾಲಯಗಳು ಸಂಪೂರ್ಣ ಜಲಾವೃತವಾಗಿದ್ದು, ಈ ಪ್ರದೇಶದ ಜನತೆಗೆ ಭಾರಿ ತೊಂದರೆ ಉಂಟಾಗಿದೆ.
ಜಿಲ್ಲಾಡಳಿತದಿಂದ ಭೀಮಾ ನದಿಯ ತೀರದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದ್ದು, ನದಿಗೆ ತೆರಳದಂತೆ ಸೂಚಿಸಲಾಗಿದೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದು ಎಂದು ಕಡ್ಡಾಯವಾಗಿ ಎಚ್ಚರಿಕೆ ನೀಡಲಾಗಿದೆ. ಭೀಮಾ ನದಿಗೆ ಗುರುಸಣಗಿ ಬ್ಯಾರೇಜ್ ನಿಂದ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್ ನಿಂದ ನೀರು ಬಿಡುಗಡೆಯಾಗಿದ್ದು, ರೈತರಿಗೂ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಭೀಮಾ ನದಿಯ ತೀರದ ರೈತರು ಮತ್ತು ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಪ್ರವಾಹದ ಭೀತಿ ಇದ್ದರೆ ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅತಿಯಾದ ನೀರಿನಿಂದ ಬಾಳಿನ ಹಾನಿ ಮತ್ತು ಆಸ್ತಿ ನಷ್ಟ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವು ತಿಳಿಸಿದೆ.
ಮಹಾರಾಷ್ಟ್ರದ ಜಲಾಶಯಗಳಿಂದ ನಿರಂತರ ನೀರು ಹರಿದುಬರುತ್ತಿರುವುದರಿಂದ, ಯಾದಗಿರಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಹೆಚ್ಚಳವಾಗಿದೆ.
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯ ಪರಿಣಾಮದಿಂದ ಉಜನಿ ಮತ್ತು ವೀರ್ ಜಲಾಶಯಗಳಿಂದ ನಿರಂತರ ನೀರು ಬಿಡುಗಡೆಯಾಗುತ್ತಿದೆ. ಇದರಿಂದಾಗಿ ಭೀಮಾ ನದಿಯ ತೀರದ ದೇವಾಲಯಗಳು ಮತ್ತು ಗ್ರಾಮಗಳು ಮುಳುಗಡೆಯಾಗುತ್ತಿವೆ.
ಜಿಲ್ಲಾಡಳಿತವು ತಕ್ಷಣ ಕಾರ್ಯಪ್ರವೃತ್ತಿಯಾಗಿ ಪ್ರವಾಹದ ಸಂದರ್ಭದಲ್ಲಿ ಜನರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಭೀಮಾ ನದಿಯ ತೀರದ ಪ್ರದೇಶಗಳಲ್ಲಿ ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ, ಯಾವುದೇ ಅನಾಹುತವನ್ನು ತಪ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.