Mon. Jul 21st, 2025

ನಿರ್ಗತಿಕ ಮಕ್ಕಳ ಆಧಾರ್ ದಾಖಲೆಗಾಗಿ ಜಿಲ್ಲಾ ಸಾಥಿ ಸಮಿತಿ ರಚನೆನಿರ್ಗತಿಕ ಮಕ್ಕಳು ಕಂಡುಬಂದಲ್ಲಿ ಮಾಹಿತಿ ನೀಡಿ: ನ್ಯಾ.ರಾಜೇಶ್ ಎನ್.ಹೊಸಮನೆ

ನಿರ್ಗತಿಕ ಮಕ್ಕಳ ಆಧಾರ್ ದಾಖಲೆಗಾಗಿ ಜಿಲ್ಲಾ ಸಾಥಿ ಸಮಿತಿ ರಚನೆನಿರ್ಗತಿಕ ಮಕ್ಕಳು ಕಂಡುಬಂದಲ್ಲಿ ಮಾಹಿತಿ ನೀಡಿ: ನ್ಯಾ.ರಾಜೇಶ್ ಎನ್.ಹೊಸಮನೆ

ಬಳ್ಳಾರಿ, ಜೂ.25:

ನಿರ್ಗತಿಕ ಮಕ್ಕಳಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಜಿಲ್ಲಾಮಟ್ಟದಲ್ಲಿ ಇಂಥ ಮಕ್ಕಳನ್ನು ಗುರುತಿಸಿ, ಅವರಿಗೆ ಆಧಾರ್ ನೋಂದಣಿಯಿಂದ ಆರಂಭಿಸಿ ಶಿಕ್ಷಣ, ಆರೋಗ್ಯ ಮತ್ತು ಸರ್ಕಾರಿ ಸೌಲಭ್ಯಗಳನ್ನು ಲಭಿಸಿಸಿಕೊಡುವ ಮಹತ್ವಾಕಾಂಕ್ಷಿ ‘ಸಾಥಿ’ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಈ ಕುರಿತು ಮಾಹಿತಿ ನೀಡಿದ್ದು, 18 ವರ್ಷದೊಳಗಿನ ನಿರ್ಗತಿಕ ಮಕ್ಕಳಿಗೆ ಸಕಾಲದಲ್ಲಿ ನೆರವು ಒದಗಿಸಲು ವಿಶೇಷ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಯಾರು ‘ನಿರ್ಗತಿಕ ಮಕ್ಕಳು’?

ಅವರು ನೀಡಿದ ವಿವರದಂತೆ, ಸರ್ಕಾರಿ ಸಂಸ್ಥೆಗಳಲ್ಲಿ ಪಾಲನೆಯಲ್ಲಿರುವ ಮಕ್ಕಳು, ಬೀದಿ, ಕೊಳಗುಳಿ ಪ್ರದೇಶ, ರೈಲ್ವೆ ನಿಲ್ದಾಣಗಳಲ್ಲಿ ವಾಸಿಸುವ ಮಕ್ಕಳು, ಅನಾಥರು, ಪರಿತ್ಯಕ್ತರು, ಏಕಪೋಷಕ ಮಕ್ಕಳಾಗಿ ಬದುಕುತ್ತಿರುವವರು, ಬಾಲ ಕಾರ್ಮಿಕರು, ಭಿಕ್ಷಾಟನೆ ಮಾಡುವವರು, ಮಾದಕ ವ್ಯಸನದ ಅವಲಂಬಿತರು, ಲೈಂಗಿಕ ಹಾಗೂ ಶಾರೀರಿಕ ದೌರ್ಜನ್ಯ ಅನುಭವಿಸಿರುವ ಮಕ್ಕಳು, ಜೀತ ಪದ್ಧತಿಯಲ್ಲಿ ಬಂಧಿತರಾಗಿರುವ ಮಕ್ಕಳು, ನೋಂದಾಯಿಸದ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ವಾಸಿಸುತ್ತಿರುವ ಮಕ್ಕಳು ಇತ್ಯಾದಿಗಳನ್ನು ‘ನಿರ್ಗತಿಕ’ರ ಶ್ರೇಣಿಯಲ್ಲಿ ಪರಿಗಣಿಸಲಾಗಿದೆ.

ಅಭಿಯಾನದ ಉದ್ದೇಶ ಮತ್ತು ಚಟುವಟಿಕೆಗಳು

ಈ ಮಕ್ಕಳನ್ನು ಗುರುತಿಸಿ ಅವರಿಗೆ ಆಧಾರ್ ನೋಂದಣಿ ಮಾಡಿಸಲಾಗುವುದು. ನಂತರವಾಗಿ, ಅವರ ಪೋಷಕರನ್ನು ಗುರುತಿಸಿ ಕುಟುಂಬಕ್ಕೆ ಮರಳಿಸಲು ಸಹಾಯ ಮಾಡಲಾಗುತ್ತದೆ. ಇದಲ್ಲದೆ, ಆರೋಗ್ಯ ರಕ್ಷಣೆ, ಶಿಕ್ಷಣ, ಕಾನೂನಿನ ನೆರವು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ಕಲ್ಪಿಸಲಾಗುತ್ತದೆ.

ಸಮಿತಿಯ ರಚನೆ ಹಾಗೂ ಕಾರ್ಯಪದ್ಧತಿ

‘ಸಾಥಿ’ ಸಮಿತಿಯಲ್ಲಿ ಅಧ್ಯಕ್ಷರಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ನೇಮಕಗೊಂಡಿದ್ದು, ಸದಸ್ಯರಾಗಿ ತಹಶೀಲ್ದಾರರು, ಮಕ್ಕಳ ರಕ್ಷಣೆ ಅಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಅಧಿಕಾರಿಗಳು, ಅನಾಥಾಶ್ರಮ ಹಾಗೂ ಮಕ್ಕಳ ಆರೈಕೆ ಕೇಂದ್ರಗಳ ಪ್ರತಿನಿಧಿಗಳು, ಪ್ಯಾನಲ್ ವಕೀಲರು ಮತ್ತು ಅರೆ-ಕಾಲಿಕ ಕಾನೂನು ಸ್ವಯಂಸೇವಕರು ಸೇರಿರುತ್ತಾರೆ. ಜೊತೆಗೆ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವವೂ ಈ ಕಾರ್ಯದಲ್ಲಿ ನಿರ್ಧಾರಕವಾಗಲಿದೆ.

ಸಾಮಾನ್ಯರ ಸಹಕಾರ ಅಗತ್ಯ

ಸಮಾಜಿಕ ಹೊಣೆಗಾರಿಕೆಯಿಂದ ಸಾರ್ವಜನಿಕರು ಸಹ ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂಬುದು ಅಧಿಕಾರಿಗಳ ಮನವಿ. ನಿರ್ಗತಿಕ ಮಕ್ಕಳು ಕಂಡುಬಂದರೆ ತಕ್ಷಣವೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದೂರವಾಣಿ ಸಂಖ್ಯೆ 08392-278077 ಅಥವಾ ಮೊಬೈಲ್ ಸಂಖ್ಯೆ 9141193929 ಅಥವಾ ಮಕ್ಕಳ ಸಹಾಯವಾಣಿ 1098 ಹಾಗೂ ಉಚಿತ ಕಾನೂನು ಸಹಾಯ ಸಂಖ್ಯೆ 15100ಗೆ ಸಂಪರ್ಕಿಸಲು ಅವರು ಕರೆ ನೀಡಿದ್ದಾರೆ.

ಅಭಿಯಾನದ ಪ್ರಭಾವ: ಭವಿಷ್ಯ ನಿರ್ಮಾಣದ ಹಾದಿ

ಈ ಅಭಿಯಾನದ ಮೂಲಕ ಬಾಲ್ಯದಲ್ಲಿ ಅನ್ಯಾಯ ಅನುಭವಿಸುತ್ತಿರುವ ಮಕ್ಕಳಿಗೆ ಹೊಸ ಭವಿಷ್ಯ ನಿರ್ಮಾಣದ ಹಾದಿ ತೆರೆದುಕೊಡಲು ಸಾಧ್ಯವಿದೆ. ಸಮಾಜದ ತಳಮಟ್ಟದ ಮಕ್ಕಳಿಗೂ ಮಾನವೀಯ ಬದುಕು ಹಾಗೂ ಸಕಾಲದ ಸೌಲಭ್ಯಗಳ ತಲುಪಿಸುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಸಾಥಿ ಸಮಿತಿಯ ನಿರಂತರ ಕಾರ್ಯಾಚರಣೆ ಈ ಮಿಷನ್‌ನ ಯಶಸ್ಸಿಗೆ ದಾರಿ ತೋರಲಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!