Mon. Jul 21st, 2025

ಚಾರಣಕ್ಕೆ ಹೋಗಿ ಕಣ್ಮರೆಯಾಗಿದ್ದ 9 ವಿದ್ಯಾರ್ಥಿಗಳ ರಕ್ಷಣೆ, ಎಫ್‌ಐಆರ್ ದಾಖಲು

ಚಾರಣಕ್ಕೆ ಹೋಗಿ ಕಣ್ಮರೆಯಾಗಿದ್ದ 9 ವಿದ್ಯಾರ್ಥಿಗಳ ರಕ್ಷಣೆ, ಎಫ್‌ಐಆರ್ ದಾಖಲು

ಜ ೦೧: ಚಾರಣಕ್ಕೆ ಹೋಗಿ ಕಣ್ಮರೆಯಾಗಿದ್ದ 9 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಕರ್ನಾಟಕ ಹಾಗೂ ಗೋವಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಬೆಳಗಾವಿಯ ಜಿ.ಎಸ್.ಎಸ್. ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ 9 ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ನಾಲ್ಕು ಬೈಕ್‌ಗಳಲ್ಲಿ ಗೋವಾ-ಕರ್ನಾಟಕ ಗಡಿಯ ಪಾರವಾಡ ಗ್ರಾಮದ ಹೊರವಲಯದ ದಟ್ಟ ಅರಣ್ಯದಲ್ಲಿರುವ ಜಾವಾಣಿ ಜಲಪಾತ ವೀಕ್ಷಿಸಲು ತೆರಳಿದ್ದರು.

ಪಾರವಾಡ ಗ್ರಾಮದಿಂದ 3 ಕಿ.ಮೀ ದೂರದವರೆಗೆ ಕಾಲುದಾರಿಯಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದ ಅವರು ಒಂದು ಮರದ ಕೆಳಗೆ ಬೈಕ್ ನಿಲ್ಲಿಸಿ ಅರಣ್ಯದೊಳಗೆ ನಡೆದುಕೊಂಡು ಹೋಗಿದ್ದರು. ಅರಣ್ಯದ ಕಾಲುದಾರಿಯ ಮೂಲಕ ಜಲಪಾತಕ್ಕೆ ತೆರಳಿ, ಪಾರ್ಟಿ ಮಾಡಿದ್ದರು. ಸಂಜೆ ವೇಳೆ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಮರಳುವಾಗ ದಾರಿ ತಪ್ಪಿದ್ದರು.

ದಟ್ಟ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಮರಳಿ ಬರುವ ಸಂದರ್ಭದಲ್ಲಿ ತಾವು ಹಾದಿ ತಪ್ಪಿಸಿಕೊಂಡಿದ್ದು, ತಮ್ಮ ನೆರವಿಗೆ ಧಾವಿಸುವಂತೆ ಶುಕ್ರವಾರ ರಾತ್ರಿ ತಮ್ಮ ಕಾಲೇಜಿನ ಸ್ನೇಹಿತರಿಗೆ ಸಂದೇಶ ಕಳಿಸಿದ್ದರು. ಬಳಿಕ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಕೂಡಲೇ ಎಸಿಎಫ್ ಸಂತೋಷ ಚವಾಣ ನೇತೃತ್ವದ ತಂಡ ರಾತ್ರಿ 10 ಗಂಟೆಗೆ ಪಾರವಾಡ ಅರಣ್ಯದಿಂದ ಕಾರ್ಯಾಚರಣೆ ಆರಂಭಿಸಿತು. ಜೊತೆಗೆ ವಿದ್ಯಾರ್ಥಿಗಳ ನಾಪತ್ತೆ ಸಂಗತಿಯನ್ನು ಗೋವಾದ ಅರಣ್ಯ ಇಲಾಖೆಗೂ‌ ಮುಟ್ಟಿಸಿದ್ದರಿಂದ ಅವರೂ ಗೋವಾ ಅರಣ್ಯದಿಂದ ಕಾರ್ಯಾಚರಣೆ ನಡೆಸಿದರು.

ಶನಿವಾರ ನಸುಕಿನ ಜಾವ ಗೋವಾ ಅರಣ್ಯದ ಹದ್ದಿಯಲ್ಲಿ ಬಂಡೆ ಕಲ್ಲುಗಳ ನಡುವೆ ಸುಸ್ತಾಗಿ ಕುಳಿತಿದ್ದ ವಿದ್ಯಾರ್ಥಿಗಳು ಪತ್ತೆಯಾದರು. ಅವರನ್ನು ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಗೋವಾ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂಬಂಧ ಅಕ್ರಮ ಅರಣ್ಯ ಪ್ರವೇಶ ಆರೋಪದಡಿ ಎಲ್ಲಾ ವಿದ್ಯಾರ್ಥಿಗಳ ವಿರುದ್ಧ ಗೋವಾ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ಬಳಿಕ ಅಧಿಕಾರಿಗಳು ವಿದ್ಯಾರ್ಥಿಗಳ ಪಾಲಕರು ಮತ್ತು ಕಾಲೇಜಿನ ಮುಖ್ಯಸ್ಥರಿಗೆ ವಿಷಯ ಮುಟ್ಟಿಸಿದ್ದು, ಅವರಿಂದ ಮುಚ್ಚಳಿಕೆ ಬರೆಸಿಕೊಂಡು, ವಿದ್ಯಾರ್ಥಿಗಳನ್ನು ಹಸ್ತಾಂತರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಕಣಕುಂಬಿ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಶಿವಕುಮಾರ್, ಭೀಮಗಡ ಆರ್‌ಎಫ್‌ಒ ರಾಕೇಶ್ ಅರ್ಜುನ್‌ವಾಡ್, ಖಾನಾಪುರ ಆರ್‌ಎಫ್‌ಒ ನಾಗರಾಜ ಬಾಳೆಹೊಸೂರು, ಉಪ ಆರ್‌ಎಫ್‌ಒ ವಿನಾಯಕ ಪಾಟೀಲ್, ಗೋವಾ ಡಿಎಫ್‌ಒ ಆನಂದ್ ಸೇರಿದಂತೆ ಉಭಯ ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!