- ಭಾರತೀಯ ರಿಸರ್ವ್ ಬ್ಯಾಂಕ್ (RBI) ಸತತ 8ನೇ ಬಾರಿಗೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
- ಪ್ರಸ್ತುತ ಬಡ್ಡಿ ದರ ಶೇ.6.5ರಷ್ಟಿದೆ. ಈಗ ಅದನ್ನೇ ಮುಂದುವರಿಸಿ ಆರ್‌ಬಿಐ ಹಣಕಾಸು ನೀತಿ ಸಮಿತಿ ನಿರ್ಧಾರ ಕೈಗೊಂಡಿದೆ
- ಹೀಗಾಗಿ ಸಾಲ ಯಾವುದೇ ದುಬಾರಿಯಾಗುವುದಿಲ್ಲ.
- ಜೊತೆಗೆ ನಿಮ್ಮ EMI ಕೂಡ ಹೆಚ್ಚಾಗುವುದಿಲ್ಲ.
- ಆರ್‌ಬಿಐ ಈ ಹಿಂದೆ 2023ರ ಫೆಬ್ರವರಿಯಲ್ಲಿ 0.25% ರಿಂದ 6.5% ರಷ್ಟು ಬಡ್ಡಿದರ ಹೆಚ್ಚಿಸಿತ್ತು.
ಜೂನ್ 7: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಶುಕ್ರವಾರ ರೆಪೋ ದರವನ್ನು ಶೇ. 6.5ರಲ್ಲಿ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಬುಧವಾರದಿಂದ (ಜೂನ್ 5) ನಡೆದ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಕ್ತಿಕಾಂತ ದಾಸ್, ಹಣದುಬ್ಬರ ಇನ್ನೂ ಗುರಿಗಿಂತ ಮೇಲೆಯೇ ಇರುವುದರಿಂದ ಇನ್ನಷ್ಟು ಕಾಲ ಬಡ್ಡಿದರ ಮುಂದುವರಿಸುವುದು ಸೂಕ್ತ ಎನ್ನುವ ನಿಲುವು ತಳೆದಿದ್ದಾರೆ. ಕಳೆದ 15-16 ತಿಂಗಳಿಂದ ಆರ್‌ಬಿಐ ತನ್ನ ರೆಪೋ ಅಥವಾ ಬಡ್ಡಿದರದಲ್ಲಿ ಬದಲಾವಣೆ ಮಾಡಿಲ್ಲ. 2023ರ ಫೆಬ್ರುವರಿ 8ರಂದು ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದ ಈವರೆಗೂ ರೆಪೋ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಇನ್ನಷ್ಟು ತಿಂಗಳು ಇದೇ ದರ ಮುಂದುವರಿಯುವ ಸಾಧ್ಯತೆ ಇದೆ.
ಈ ಬಾರಿ ಆರ್ಬಿಐನಿಂದ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎಂದೇ ಬಹಳಷ್ಟು ಆರ್ಥಿಕ ತಜ್ಞರು ಅಂದಾಜಿಸಿದ್ದರು. ಅದು ನಿಜವಾಗಿದೆ. ಹಣದುಬ್ಬರ ಇನ್ನಷ್ಟು ಕಾಲ ತುಸು ಮೇಲ್ಮಟ್ಟದಲ್ಲೇ ಇರುವುದರಿಂದ, ಮತ್ತು ಹಣದುಬ್ಬರ ಹೆಚ್ಚೇ ಇದ್ದರೂ ಜಿಡಿಪಿ ನಿರೀಕ್ಷೆಮೀರಿ ಬೆಳೆಯುತ್ತಿರುವುದರಿಂದ ರೆಪೋ ದರದಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಆರ್ಬಿಐಗೆ ಬಂದಿಲ್ಲ. ಶಕ್ತಿಕಾಂತ ದಾಸ್ ಕೂಡ ಇಂದು ಸುದ್ದಿಗೋಷ್ಠಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದ್ದಾರೆ. ರೆಪೋದರ, ರಿವರ್ಸ್ ರೆಪೋ, ವಿತ್ಡ್ರಾಯಲ್ ಆಫ್ ಅಕಾಮೊಡೇಶನ್, ಎಸ್ಎಲ್ಆರ್ ಹೀಗೆ ವಿವಿಧ ದರಗಳ ಯಥಾಸ್ಥಿತಿ ಮುಂದುವರಿಯಲಿದೆ. ರೆಪೋ ದರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಈ ಬಾರಿಯ ಎಂಪಿಸಿ ಸಭೆಯ ವಿಶೇಷತೆ ಎಂದರೆ ಯಥಾಸ್ಥಿತಿ ಮುಂದುವರಿಸುವ ನಿರ್ಧಾರದ ಪರವಾಗಿ 4:2ರ ಬಹುಮತ ವ್ಯಕ್ತವಾಗಿದೆ. ಆರು ಸದಸ್ಯರಿರುವ ಎಂಪಿಸಿ ಸಭೆಯಲ್ಲಿ ಇಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಗಮನಾರ್ಹ. ಹಿಂದಿನ ಕೆಲ ಎಂಪಿಸಿ ಸಭೆಗಳಲ್ಲಿ 5:1ರ ಬಹುಮತದಿಂದ ನಿರ್ಧಾರ ಪ್ರಕಟವಾಗುತ್ತಿತ್ತು.

