Wed. Feb 11th, 2026

ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ವಿಳಂಬ-ರಾಯಚೂರು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಎಚ್ಚರಿಕೆ: ಭೀಮಸೇನೆ ಕರ್ನಾಟಕ

ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ವಿಳಂಬ-ರಾಯಚೂರು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಎಚ್ಚರಿಕೆ: ಭೀಮಸೇನೆ ಕರ್ನಾಟಕ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯ, ಈಗಿನ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವಲ್ಲಿ ಗಂಭೀರ ವಿಳಂಬ ತೋರಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ವಲಯದಲ್ಲಿ ಆಕ್ರೋಶ ಹೆಚ್ಚಾಗಿದೆ. ಡಿಗ್ರಿ ವ್ಯಾಸಂಗ ಮುಗಿದು ಒಂದು ವರ್ಷ ಆರು ತಿಂಗಳಿಗಿಂತ ಹೆಚ್ಚು ಸಮಯ ಕಳೆದರೂ, ಇನ್ನೂ ಕೆಲವರಿಗೆ ಕೇವಲ 3 ಸೆಮಿಸ್ಟರ್‌ಗಳ ಅಂಕಪಟ್ಟಿ ಮಾತ್ರ ದೊರೆತಿದೆ. ಕೆಲವರಿಗೆ 4 ಮತ್ತು 5ನೇ ಸೆಮಿಸ್ಟರ್ ಅಂಕಪಟ್ಟಿ ಸಿಕ್ಕಿದ್ದರೂ, 6ನೇ ಸೆಮಿಸ್ಟರ್‌ ಅಂಕಪಟ್ಟಿ ಯಾರಿಗೂ ದೊರೆತಿಲ್ಲ.

“ನಿಯಮಾನುಸಾರ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿ ನೀಡುವುದು ವಿಶ್ವವಿದ್ಯಾಲಯದ ಕರ್ತವ್ಯ. ಆದರೆ ಕೆಲವರಿಗೆ ಕೆಲ ಸೆಮಿಸ್ಟರ್‌ಗಳ ಅಂಕಪಟ್ಟಿ ನೀಡುವ ಮೂಲಕ ವಿಶ್ವವಿದ್ಯಾಲಯವು ನಿರ್ಲಕ್ಷ್ಯ ತೋರಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯವೇ ಅಂಧಕಾರದಲ್ಲಿ ಸಿಲುಕಿದೆ” ಎಂದು ಭೀಮಸೇನೆ ಕರ್ನಾಟಕ ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಡಿಗ್ರಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮುಂದಿನ ಅಧ್ಯಯನ ಹಾಗೂ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಈ ಸಂದರ್ಭದಲ್ಲಿ, ಅಂಕಪಟ್ಟಿ ದೊರೆಯದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಅಡ್ಡಿಯಾಗಿದೆ. “ಕಾಲೇಜು ಪ್ರಾಂಶುಪಾಲರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ತೋರಿಸುತ್ತಿರುವ ನೆಪಗಳನ್ನು ನಾವು ಒಪ್ಪುವುದಿಲ್ಲ. ಕೂಡಲೇ ಅಂಕಪಟ್ಟಿಗಳನ್ನು ನೀಡದಿದ್ದಲ್ಲಿ, ನಾವು ವಿಶ್ವವಿದ್ಯಾಲಯ ಮುತ್ತಿಗೆ ಹಾಕುವ ಗಟ್ಟಿಯಾದ ಹೋರಾಟಕ್ಕೆ ಮುಂದಾಗುತ್ತೇವೆ” ಎಂದು ಅವರು ಎಚ್ಚರಿಸಿದರು.

ಅದೇ ವೇಳೆ, “ಅಂಕಪಟ್ಟಿ ಮುದ್ರಣಕ್ಕೆ ಈಗಾಗಲೇ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು ವಿಶ್ವವಿದ್ಯಾಲಯದ ನಿರ್ವಹಣಾ ವೈಫಲ್ಯವನ್ನು ತೋರಿಸುತ್ತದೆ. ವಿದ್ಯಾರ್ಥಿಗಳ ಹಿತಾಸಕ್ತಿ ಕಡೆಗಣನೆಯಾಗಿದ್ದರೆ, ಭೀಮಸೇನೆ ಕರ್ನಾಟಕ ಕ್ರಾಂತಿಕಾರಿ ಚಳುವಳಿಯನ್ನು ಆರಂಭಿಸಲು ಹಿಂಜರಿಯುವುದಿಲ್ಲ” ಎಂದು ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!