ರಾಯಚೂರು, ಫೆಬ್ರವರಿ 6: ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಜನಮನವನ್ನು ಕಳವಳಗೊಳಿಸಿದೆ. ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಹೇಯ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತೆ ಬಾಲಕಿಯನ್ನು ಮಾನ್ವಿ ತಾಲೂಕು ಆಸ್ಪತ್ರೆಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಪ್ರಕರಣದಲ್ಲಿ ಪೊಲೀಸರ ಕಾರ್ಯಾಚರಣೆ ತಕ್ಷಣವೇ ಆರಂಭಗೊಂಡಿದ್ದು, ಅತ್ಯಾಚಾರ ಆರೋಪಿ ಶಿವನಗೌಡ ಮತ್ತು ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆಯನ್ನು ವಶಕ್ಕೆ ಪಡೆದು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ನಿಜಕ್ಕೂ ಏನಾಯಿತು?
ಶಾಲೆಯಿಂದ ಮನೆಗೆ ಕರೆದೊಯ್ಯುವ ನೆಪ ಹೇಳಿ ಆರೋಪಿ ಶಿವನಗೌಡ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ಆ ನಂತರ ಆಕೆಯ ಮೇಲೆ ಅಮಾನವೀಯ ಕೃತ್ಯ ಎಸಗಿದ್ದಾನೆ. ಈ ಘಟನೆಯ ನಂತರ ಬಾಲಕಿ ತೀವ್ರ ಆಘಾತಕ್ಕೆ ಒಳಗಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲಾ ಆಡಳಿತದ ವಿರುದ್ಧ ಪೋಷಕರ ಆಕ್ರೋಶ
ಪೋಷಕರ ಅನುಮತಿಯಿಲ್ಲದೆ ಅಪರಿಚಿತರೊಂದಿಗೆ ಮಗುವನ್ನು ಕಳುಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೋಷಕರು, ಶಾಲಾ ಆಡಳಿತದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಈ ರೀತಿ ನಿರ್ಲಕ್ಷ್ಯ ಮಾಡಿದ ಶಾಲಾ ಆಡಳಿತದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅತ್ಯಾಚಾರ ಎಸಗಿದಾತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಬೇರೆ ಯಾವ ಮಕ್ಕಳಿಗೂ ಇಂತಹ ಘಟನೆ ಮರುಕಳಿಸಬಾರದು” ಎಂದು ಪೋಷಕರು ಆಗ್ರಹಿಸಿದ್ದಾರೆ.

