ಯಾದಗಿರಿ: “ಸಾಧಿಸುವ ಛಲವಿದ್ದಾಗ ಮಾತ್ರ ಸಾಧನೆ ಸಾಧ್ಯ” ಎಂದು ಜಯ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಬಿಕ. ಆರ್. ಪಾಟೀಲ್ ಚಟ್ನಳ್ಳಿ ಹೇಳಿದರು.
ವಿವಾಹಿತ ಮಹಿಳೆಯರ ಹಾಗೂ ಮಕ್ಕಳ ಸೌಂದರ್ಯ-ಪ್ರತಿಭಾ ರಾಷ್ಟ್ರೀಯ ಮಿಸ್ ಅಂಡ್ ಮಿಸ್ಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್ 2025ರ 9ನೇ ಆವೃತ್ತಿಯ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಿದ ಯಾದಗಿರಿ ನಗರದ ಹೃದಯ ರೋಗ ತಜ್ಞರಾದ ಡಾ. ವೀರೇಶ್ ಜಾಕಾ ಅವರ ಪುತ್ರಿ ಅವನಿ ಜಾಕಾ ರಾಷ್ಟ್ರೀಯ ಮಟ್ಟದ ಪ್ರಥಮ ರನ್ನರ್ ಆಫ್ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ, ಗುರುವಾರ ಅವರ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರಾಂಬಿಕ ಪಾಟೀಲ್, “ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮೂಲಕ ಅವನಿ ನಮ್ಮ ರಾಜ್ಯಕ್ಕೂ ಜಿಲ್ಲೆಗೂ ಕೀರ್ತಿ ತಂದಿದ್ದಾಳೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆದು ಎತ್ತರಕ್ಕೇರಲಿ” ಎಂದು ಹಾರೈಸಿದರು.
ಕರ್ನಾಟಕ ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀದೇವಿ ಕಟ್ಟಿಮಣಿ ಮಾತನಾಡಿ, “ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನು ಗುರುತಿಸಿ, ಪಾಲಕರು ಬೆಂಬಲಿಸಿದಾಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ. ಡಾ. ವೀರೇಶ್ ಜಾಕಾ ಮತ್ತು ಅವರ ಪತ್ನಿ ಡಾ. ಶ್ವೇತಾ ಜಾಕಾ ಅವರು ಅವನಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವುದು ಹೆಮ್ಮೆಯ ವಿಷಯ” ಎಂದರು.
ಈ ಸಂದರ್ಭದಲ್ಲಿ ಡಾ. ವೀರೇಶ್ ಜಾಕಾ, ರೆಡ್ಡಿ ಬಾಡಿಯಾಲ, ನಿಂಗಣ್ಣ ಜಡಿ, ರಾಘವೇಂದ್ರ ಪಾಟೀಲ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

