ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಣಿಕ ನುಡಿಗೆ ಬಹಳ ಮಹತ್ವ ಇದೆ. ಕೆಲವು ಕಡೆ ವರ್ಷಕ್ಕೆ ಎರಡು ಸಲ ಕಾರ್ಣಿಕ ನುಡಿ, ಇನ್ನು ಕೆಲವು ಕಡೆ ವರ್ಷಕ್ಕೊಮ್ಮೆ ಹೀಗೆ ಆಯಾ ಶ್ರದ್ಧಾಕೇಂದ್ರದ ವಾಡಿಕೆಗೆ ಅನುಗುಣವಾಗಿ ಇದು ನಡೆಯುತ್ತದೆ. ಇತ್ತೀಚಿನ ಕಾರ್ಣಿಕ ನುಡಿ ರಾಜಕೀಯವಾಗಿ ಗಮನಸೆಳೆದಿದ್ದು, ಚರ್ಚೆಗೆ ಒಳಗಾಗಿದೆ.
ಮುಕ್ಕೋಟಿ ಚಲ್ಲಿತಲೆ ಕಲ್ಯಾಣ ಕಟ್ಟಿತಲೆ ಪರಾಕ್- ಇದು ಗೊರವಯ್ಯರ ಕಾರ್ಣಿಕ ನುಡಿ
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕ ಉತ್ಸವ ಸೋಮವಾರ (ಅ.23) ಆಯುಧ ಪೂಜೆಯ ದಿನ ನಡೆಯಿತು. ಮುಕ್ಕೋಟಿ ಚಲ್ಲಿತಲೆ ಕಲ್ಯಾಣ ಕಟ್ಟಿತಲೆ ಪರಾಕ್ ’ ಎಂಬ ಈ ವರ್ಷದ ಐತಿಹಾಸಿಕ ಕಾರ್ಣಿಕ ನುಡಿ ಹೇಳಿ ಗೊರವಯ್ಯ ನಾಗಪ್ಪಜ್ಜ ಬಿಲ್ಲಿನಿಂದ ದುಮುಕಿದ್ದಾರೆ. ಮಾಲತೇಶ ಸ್ವಾಮಿಯೇ ಗೊರವಯ್ಯ ನಾಗಪ್ಪಜ್ಜನ ಬಾಯಿಯಲ್ಲಿ ವರ್ಷದ ಭವಿಷ್ಯ ಹೇಳಿಸುತ್ತಾನೆ ಎಂಬ ನಂಬಿಕೆ ಉತ್ತರ ಕರ್ನಾಟಕದ ಸಾವಿರಾರು ಭಕ್ತರದ್ದು.
ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷಭಟ್ಟ ಅವರು ಗೊರವಯ್ಯ ನಾಗಪ್ಪಜ್ಜ ಹೇಳಿದ ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಿ ಜನರಿಗೆ ಅರ್ಥವಾಗುವಂತೆ ವಿವರಿಸುತ್ತಾರೆ. ಇದರಂತೆ, ಮುಕ್ಕೋಟಿ ಚಲ್ಲಿತಲೆ ಕಲ್ಯಾಣ ಕಟ್ಟಿತಲೆ ಅಂದರೆ, ಮುಕ್ಕೋಟಿ ರೈತರು ನೀರಿಗಾಗಿ ಹಣ ಚಲ್ಲಿದ್ದಾರೆ. ಮಳೆ ಬೆಳೆಯಲ್ಲಿದೆ ನಷ್ಟವಾಗುವ ಸಾಧ್ಯತೆ ಇದೆ. ರಾಜ್ಯಕ್ಕೆ ವರುಣನ ಅವಕೃಪೆಯಿಂದಾಗಿ ಬೀಕರ ಬರಗಾಲ ಎದುರಾಗಬಹುದು ಎಂದು ವಿಶ್ಲೇಷಣೆ ಮಾಡಿದ್ದಾರೆ.
ಅದೇ ರೀತಿ ರಾಜಕೀಯವಾಗಿ ಕೂಡ ಇದನ್ನು ವಿಶ್ಲೇಷಿಸಿದ್ದು, ಹೆಣ್ಣಿನ ಹಸ್ತಕ್ಷೇಪದಿಂದಾಗಿ ಸುಭದ್ರ ಸರ್ಕಾರದಲ್ಲಿ ಏರುಪೇರಾಗಲಿದೆ. ವಿಶೇಷವಾಗಿ, ಕಲ್ಯಾಣಿ ಕಕ್ಕಿತಲೆ ಎಂಬುದನ್ನು ರಾಜ್ಯ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ ಎಂದು ವಿಶ್ಲೇಷಿಸಲಾಗಿದೆ. ಮಹಿಳೆಯ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ ಎಂದು ಕಾರ್ಣಿಕ ವಿಶ್ಲೇಷಿಸಿದ್ದಾರೆ.
ಕಾರ್ಣಿಕ ನುಡಿಯುವ ಸಂದರ್ಭ ಮತ್ತು ಹಿನ್ನೆಲೆ ಹೀಗಿರುತ್ತದೆ
ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ ಎಂದೇ ಇದು ಜನಪ್ರಿಯ. ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆ ದಿನ ಕಾರ್ಣಿಕ ನುಡಿಯುವುದು ವಾಡಿಕೆ. ಕಾರ್ಣಿಕ ನುಡಿಯುವ ಗೊರವಯ್ಯ ನಾಗಪ್ಪಜ್ಜ ಒಂಬತ್ತು ದಿನ ಉಪವಾಸ ಇದ್ದು ವ್ರತಾಚರಣೆ ಮಾಡುತ್ತಾರೆ.
ನವರಾತ್ರಿಯ ಆಯುಧ ಪೂಜೆಯ ದಿನ ಕಾರ್ಣಿಕ ನುಡಿಯಬೇಕಾದ ಕರಿಯಾಲ ಪ್ರದೇಶಕ್ಕೆ ಕಾರ್ಣಿಕದ ಗೊರವಯ್ಯನನ್ನು ಮೆರವಣಿಯ ಮೂಲಕ ಕರೆತರಲಾಗುತ್ತದೆ. ಮುಸ್ಸಂಜೆಯಾಗುತ್ತಿದ್ದಂತೆ ಗೊರವಯ್ಯ 15 ಅಡಿ ಎತ್ತರದ ಬಿಲ್ಲನ್ನೇರಿ “ಸದ್ದಲೆ” ಎಂದು ಕೂಗುತ್ತಾರೆ.
ಸದ್ದಲೆ ಎಂದು ಕೂಗಿದ ಕೂಡಲೇ ಸಾವಿರಾರು ಭಕ್ತರು ಮೌನದ ಮೊರೆ ಹೋಗುತ್ತಾರೆ. ಗೊರವಯ್ಯ ನುಡಿಯುವ ಕಾರ್ಣಿಕ ನುಡಿ ಕೇಳಬೇಕು ಎಂಬ ಕಾರಣಕ್ಕೆ ಈ ಕ್ರಮ. ಅದಾಗಿ ಕಾರ್ಣಿಕ ನುಡಿಯುವ ಗೊರವಯ್ಯ ಬಳಿಕ ಕೆಳಕ್ಕೆ ಹಾರುವುದು ವಾಡಿಕೆ.
ಹಿರಿಯೂರು ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ದೇಗುಲದಲ್ಲಿ ಸರಪಳಿ ಪವಾಡ
ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ (ಅ.25) ಸಂಜೆ ಐದೂಕಾಲು ಮಾರು ದೂರಕ್ಕೆ ದೇವರ ಸರಪಳಿ ತುಂಡಾಗಿದೆ. ಇಲ್ಲಿ ಸರಪಳಿ ಪವಾಡವನ್ನೇ ಕಾರ್ಣಿಕದ ಭವಿಷ್ಯವಾಗಿ ನಂಬುತ್ತಾರೆ.
ಹಾಲುಮತದ ಮೂರು ಮನೆತನದವರಾದ ಭಂಡಾರದವರು ಗಣೆಚಾರರು, ಸೊಪ್ಪಿನವರು ಸರಪಳಿ ಪೂಜೆ ನಡೆಸಿದ ಬಳಿಕ 15 ಮೀಟರ್ ಉದ್ದದ ದೇವರ ಸರಪಳಿಯನ್ನು ಎಳೆಯಲಾರಂಭಿಸಿದರು. ಒಂದು ಗಂಟೆ ನಡೆದ ಎಳೆದಾಟದಲ್ಲಿ ಸರಪಳಿ 5.25 ಮೀಟರ್ ಉದ್ದದಲ್ಲಿ ತುಂಡಾಗಿದೆ. ಇದನ್ನು ಗಮನಿಸಿದ ಹಿರಿಯರು ಮುಂಬರುವ ವರ್ಷ ಮಳೆ – ಬೆಳೆ ಸಾಧಾರಣ ಎಂದು ಭವಿಷ್ಯ ನುಡಿದರು
ಬೀರೂರು ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿ
ಚಿಕ್ಕಮಗಳೂರು ಜಿಲ್ಲೆ ಬೀರೂರು ಮಹಾನವಮಿ ಬಯಲಿನಲ್ಲಿ ಬುಧವಾರ (ಅಕ್ಟೋಬರ್ 25) ಮುಂಜಾನೆ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕದ ನುಡಿ ಪ್ರಕಟವಾಗಿದೆ. ದಶರಥ ಪೂಜಾರ್ ಈ ಕಾರ್ಣಿಕ ನುಡಿದಿದ್ದಾರೆ.
“ಇಟ್ಟ ರಾಮನ ಬಾಣ ಹುಸಿಯಿಲ್ಲ, ಸುರರು ಅಸುರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದ ಇರಬೇಕು ಪರಾಕ್”
ಇದು ಗೊರವಯ್ಯ ದಶರಥ ಪೂಜಾರ್ ನುಡಿದ ಕಾರ್ಣಿಕದ ನುಡಿ. ಇಲ್ಲೂ ಕಾದಾಟದ ಎಚ್ಚರಿಕೆಯೊಂದಿಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವಿದೆ.