ಫೆ ೦೩:- ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಭಕ್ತರ ಭಾವನೆಗಳಿಗೆ ತೀವ್ರ ಆಘಾತ ಉಂಟು ಮಾಡುವಂತಹ ಅಮಾನವೀಯ ಘಟನೆ ನಡೆದಿದೆ. ದುಷ್ಕರ್ಮಿಗಳು ರಾತ್ರೋರಾತ್ರಿ ಮರೆಮ್ಮ ದೇವಿ ದೇವಸ್ಥಾನದ ಬೀಗ ಮುರಿದು ಒಳನುಗ್ಗಿ, ದೇವಿಯ ಮೂರ್ತಿಯನ್ನು ಅಘಾತಕಾರಿ ರೀತಿಯಲ್ಲಿ ಧ್ವಂಸಗೊಳಿಸಿದ್ದು, ಅದನ್ನು ಸುಟ್ಟು ಭಸ್ಮ ಮಾಡಿದ್ದಾರೆ.
ರಾತ್ರೋರಾತ್ರಿ ಕೃತ್ಯ – ದೇವಾಲಯದಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು
ಸ್ಥಳೀಯ ನಿವಾಸಿಗಳ ಪ್ರಕಾರ, ದುಷ್ಕರ್ಮಿಗಳು ದೇವಾಲಯಕ್ಕೆ ನುಗ್ಗಿ ಮರೆಮ್ಮ ದೇವಿಯ ಮೂರ್ತಿಯನ್ನು ಕಿತ್ತೆಸೆದು, ಪಕ್ಕದಲ್ಲಿದ್ದ ಸೀಮೆ ಮರೆಮ್ಮ ಕುಳಿತಿದ್ದ ಸಿಂಹದ ಮೂರ್ತಿಗೆ ಬೆಂಕಿ ಹಚ್ಚಿದ್ದಾರೆ. ಈ ನಾಡಿನ ಸಂಸ್ಕೃತಿ, ಭಕ್ತರ ನಂಬಿಕೆ, ದೇವರ ಮೇಲಿನ ಶ್ರದ್ಧೆಗೆ ಆಘಾತ ತರುವ ಈ ಕೃತ್ಯ ಬೆಳಗಿನ ಜಾವ ಗ್ರಾಮಸ್ಥರ ಗಮನಕ್ಕೆ ಬಂದಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಗ್ರಾಮಸ್ಥರಲ್ಲಿ ಆಕ್ರೋಶ
ಬೆಳಿಗ್ಗೆ ಪೂಜೆಗಾಗಿ ದೇವಸ್ಥಾನಕ್ಕೆ ತೆರಳಿದ ಭಕ್ತರು, ದೇವಾಲಯದ ಅವ್ಯವಸ್ಥಿತ ಸ್ಥಿತಿ ಹಾಗೂ ದೇವಿ ಮೂರ್ತಿಯ ಅವಶೇಷಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕಿಡಿಗೇಡಿಗಳ ಈ ಕ್ರೂರ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಗೆ ತಕ್ಷಣ ದೂರು ನೀಡಲಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭ
ಘಟನೆಗೆ ಸಂಬಂಧಿಸಿದಂತೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪರಿಚಿತ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲೀಸರು ವಿಶೇಷ ತಂಡಗಳನ್ನು ನಿಯೋಜಿಸಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಸ್ಥಳೀಯರ ಮಾಹಿತಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹ
ಈ ಭಯಾನಕ ಕೃತ್ಯ ಗ್ರಾಮಸ್ಥರಲ್ಲಿ ಭಾರಿ ಆಕ್ರೋಶ ಮೂಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದೂ ಸಂಘಟನೆಗಳು, ಭಕ್ತರು, ಮತ್ತು ಗ್ರಾಮಸ್ಥರು ದೇವಾಲಯದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಗಂಭೀರ ಚರ್ಚೆ ನಡೆಸುತ್ತಿದ್ದಾರೆ.
ಈ ಘಟನೆ ಸ್ಥಳೀಯ ದೇವಾಲಯಗಳ ಸುರಕ್ಷತೆ, ಧಾರ್ಮಿಕ ಭಾವನೆಗಳ ಗೌರವ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಕ್ಷಣವೇ ಕಠಿಣ ಕ್ರಮ ಕೈಗೊಂಡು ಭಕ್ತರ ನಂಬಿಕೆಗಳಿಗೆ ನ್ಯಾಯ ಒದಗಿಸಬೇಕು ಎಂಬ ಆಗ್ರಹ ಎಲ್ಲೆಡೆ ವ್ಯಕ್ತವಾಗಿದೆ.

