Tue. Mar 3rd, 2026

ಮಲ್ಲಿಕಾರ್ಜುನ ಮುತ್ಯಾ ಪೋಕ್ಸೋ ಪ್ರಕರಣ: ಫೋಟೋ–ವಿಡಿಯೋ ಹಂಚಿದರೆ ಕಾನೂನು ಕ್ರಮ, ಎಸ್‌ಪಿ ಪೃಥ್ವಿಕ್ ಶಂಕರ್ ಎಚ್ಚರಿಕೆ

ಮಲ್ಲಿಕಾರ್ಜುನ ಮುತ್ಯಾ ಪೋಕ್ಸೋ ಪ್ರಕರಣ: ಫೋಟೋ–ವಿಡಿಯೋ ಹಂಚಿದರೆ ಕಾನೂನು ಕ್ರಮ, ಎಸ್‌ಪಿ ಪೃಥ್ವಿಕ್ ಶಂಕರ್ ಎಚ್ಚರಿಕೆ

ಯಾದಗಿರಿ, ಮಾ.03: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯನ್ನು ಗುರುತಿಸಲು ಸಾಧ್ಯವಾಗುವ ಯಾವುದೇ ಮಾಹಿತಿ, ಫೋಟೋಗಳು ಅಥವಾ ವಿಡಿಯೋ ಕ್ಲಿಪ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಹಾಗೂ ಹಂಚಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯಲ್ಲಿ 25-02-2026ರಂದು ಶಹಾಪೂರದ ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ತಂದೆ ಉಮಾಪತಿ ನೀಡಿದ ದೂರಿನ ಮೇರೆಗೆ ಮಲ್ಲಿಕಾರ್ಜುನ ಮುತ್ಯಾ ಸಾ: ಮಹಲರೋಜಾ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.25/2026 ಅಡಿಯಲ್ಲಿ ಕಲಂ 75(2) ಬಿ.ಎನ್.ಎಸ್ ಕಾಯ್ದೆ-2023 ಹಾಗೂ ಕಲಂ 12 ಪೋಕ್ಸೋ ಕಾಯ್ದೆ-2012ರಡಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಪೀಡಿತ ಬಾಲಕಿಯ ಗುರುತು ಬಹಿರಂಗಪಡಿಸುವುದು ಗಂಭೀರ ಅಪರಾಧವಾಗಿದೆ. ಆದ್ದರಿಂದ ಬಾಲಕಿಯ ಫೋಟೋ, ಕುಟುಂಬ ಸದಸ್ಯರ ವಿವರಗಳು ಅಥವಾ ಯಾವುದೇ ದೃಶ್ಯಾವಳಿ ಸಂಗ್ರಹಿಸಿ ಇಟ್ಟುಕೊಂಡಿರುವುದಾದರೂ ಸಹ ಅದನ್ನು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಎಸ್‌ಪಿ ತಿಳಿಸಿದ್ದಾರೆ.

ಒಂದು ವೇಳೆ ಸಾರ್ವಜನಿಕರು ಕಾನೂನು ಉಲ್ಲಂಘಿಸಿ ಇಂತಹ ಮಾಹಿತಿಯನ್ನು ಪ್ರಸಾರ ಮಾಡಿದರೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ಮಾಡಿದೆ.

Related Post

Leave a Reply

Your email address will not be published. Required fields are marked *

error: Content is protected !!