ಯಾದಗಿರಿ: ಮಹಾತ್ಮ ಗಾಂಧೀಜಿ ಅವರ ಸರ್ವಧರ್ಮ ಸಹಿಷ್ಣುತೆ, ಭ್ರಾತೃತ್ವ ಭಾವನೆಗಳು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ಹೇಳಿದರು.
ನಗರದ ಪದವಿ ಮಹಾವಿದ್ಯಾಲಯದಲ್ಲಿ ಇಂದು ಮಹಾತ್ಮ ಗಾಂಧೀಜಿ ಅವರ 156ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದರು.
ಬ್ರಿಟಿಷರ ವಿರುದ್ಧ ಅಹಿಂಸಾ ಮಾರ್ಗದ ಮೇಲೆ ಶಾಂತಿಯುತ ಹೋರಾಟ ನಡೆಸಿದರು. ತಮ್ಮ ಜೀವನವನ್ನು ದೇಶಕ್ಕಾಗಿ ಮುಡುಪಾಗಿಟ್ಟು ಹೋರಾಡಿದ ಅವರು ಹಲವು ಬಾರಿ ತಮ್ಮ ಜೀವ ಪಣಕ್ಕಿಟ್ಟು,ಜೈಲುವಾಸ ಸಹ ಅನುಭವಿಸಿದರು.ಆದರೂ ಬ್ರಿಟಿಷ ವಸಾಹತು ಶಾಹಿ ವಿರುದ್ಧ ಹೋರಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು.
ದಕ್ಷಿಣ ಆಫ್ರಿಕಾದಲ್ಲಿಯೂ ಜನಾಂಗೀಯ ಭೇದಭಾವ ವಿರುದ್ಧ ಹೋರಾಡಿದ ಅವರ ಆದರ್ಶಗಳು ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ಜಾಗತಿಕ ನಾಯಕರ,ವಿವಿಧ ಸಮುದಾಯಗಳ ಮೇಲೆ ಪ್ರಭಾವ ಬೀರಿವೆ.
. ಭಾರತದಲ್ಲಿ ಸತ್ಯ,ಅಹಿಂಸಾ,ಶಾಂತಿ ಮೂಲ ತತ್ವಗಳು ಎಲ್ಲರಿಗೆ ದಾರಿ ದೀಪ ವಾಗಿವೆ. ಅವರ ತ್ಯಾಗ, ಬಲಿದಾನ ಸದಾ ಸ್ಮರಣೀಯ.ಅಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಭಾರತೀಯರಿಗೆ ಮೂಲ ಅಧಿಕಾರಿ ಕೊಡಿಸಬೇಕೆಂಬುದು ಅವರ ಹೋರಾಟದ ಮುಖ್ಯ ಧ್ಯೇಯವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಅವರು ತಮ್ಮ ಇಡೀ ಜೀವನ ಹೋರಾಟದಲ್ಲಿ ಕಳೆದರು. ಭಾರತೀಯರಲ್ಲಿ ಧರ್ಮ ಸಹಿಷ್ಣುತೆ ಹಾಗೂ ಎಲ್ಲ ಜಾತಿ, ಜನಾಂಗ ಹಾಗೂ ಧರ್ಮಗಳ ಮಧ್ಯೆ ಸಾಮರಸ್ಯ ಕಾಪಾಡಲು ಅವರು ಶ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸುಭಾಷ್ ಚಂದ್ರ ಕೌಲಗಿ ಅವರು.ಮಹಾತ್ಮ ಗಾಂಧೀಜಿ ಅಸ್ಪೃಶ್ಯತೆ ನಿವಾರಣೆ, ಧಾರ್ಮಿಕ ಸಾಮರಸ್ಯ ಕಾಪಾಡಲು ಶ್ರಮಿಸಿದರು.
ಶಾಂತಿ ಮಾರ್ಗದ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟ ವಿಶ್ವದ ಮೇರು ವ್ಯಕ್ತಿತ್ವದ ನಾಯಕರು ಮಹಾತ್ಮ ಗಾಂಧೀಜಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಗೋಗಿ ಗಾಂಧಿ ಪ್ರೀಯ ಭಜನೆ ಹಾಡಿದರು. ಸರ್ವಧರ್ಮ ಪ್ರಾರ್ಥನೆಯನ್ನು ಇಸ್ಲಾಂ ಧರ್ಮದ ಮೌಲಾನಾ ಚಾಂದ್ ಪಾಶಾ, ಕ್ರೈಸ್ತ ಧರ್ಮದ ಫಾದರ್ ಶ್ರೀ ವಿವೇಕ, ಜೈನ್ ಧರ್ಮದ ಸುರೇಶ್ ಜೈನ್, ಹಿಂದೂ ಧರ್ಮದ ಶ್ರೀ ನಾಗೇಶ ಪುರೋಹಿತ್ ನೆರವೇರಿಸಿ ಕೊಟ್ಟರು.
ಮಹಾತ್ಮ ಗಾಂಧೀಜಿ ಕುರಿತು ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗ , ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದಕ್ಕೂ ಮುನ್ನ ನಗರ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್
ಉಪಸ್ಥಿತರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಸುಲೈಮಾನ್ ನದಾಫ ಸ್ವಾಗತಿಸಿದರು. ಪ್ರೋ .ಗುರುಪ್ರಸಾದ್ ವೈದ್ಯ ಕಾರ್ಯಕ್ರಮ ನಿರ್ವಹಿಸಿ, ಕೊನೆಯಲ್ಲಿ ವಂದಿಸಿದರು.ಇಂದು ಬೆಳಿಗ್ಗೆ ಜಿಲ್ಲೆಯಾದ್ಯಂತ ಶ್ರಮದಾನ ಮಾಡಲಾಯಿತು.

