Tue. Jul 22nd, 2025

ಕುಮಾರಸ್ವಾಮಿ ನಮ್ಮನ್ನು ಸರ್ವನಾಶ ಮಾಡಲು ನಿರಂತರ ಯತ್ನಿಸುತ್ತಿದ್ದಾರೆ:ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಕುಮಾರಸ್ವಾಮಿ ನಮ್ಮನ್ನು ಸರ್ವನಾಶ ಮಾಡಲು ನಿರಂತರ ಯತ್ನಿಸುತ್ತಿದ್ದಾರೆ:ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಜು ೨೭:

“ನಮ್ಮನ್ನು ಸರ್ವನಾಶ ಮಾಡುವುದೇ ಎಚ್‌ಡಿ ಕುಮಾರಸ್ವಾಮಿ ಅವರ ನಿತ್ಯದ ಆಲೋಚನೆಯಾಗಿದೆ,” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ವಿವಿಧ ಯೋಜನೆಗಳ ಬಗ್ಗೆ ಬೆಂಗಳೂರಿನ ಸರ್ವ ಪಕ್ಷ ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿರುವವರ ಸರ್ವನಾಶವಾಗುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಕುಮಾರಸ್ವಾಮಿ ನಮ್ಮನ್ನು ಸರ್ವನಾಶ ಮಾಡಲು ಪ್ರತಿನಿತ್ಯ ರಾಜಕಾರಣ ಮಾಡುತ್ತಿದ್ದಾರೆ. ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಅವರ ಆಚಾರ, ವಿಚಾರ ಎಲ್ಲವೂ ನಮಗೆ ಗೊತ್ತಿದೆ. ನಾವು ರಾಮನಗರದ ಹೆಸರನ್ನು ಬದಲಿಸುತ್ತಿಲ್ಲ. ಇದು ನಮ್ಮ ಜಿಲ್ಲೆ. ಇವರು ಬಂದು ಅಕ್ರಮವಾಗಿ ಜಿಲ್ಲೆಯ ಗುರುತನ್ನು ಬದಲಿಸಿದ್ದಾರೆ. ರಾಜಕೀಯವಾಗಿ ಇದಕ್ಕೆ ಅವಕಾಶವಿದೆ ಮಾಡಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಜನ ನಮ್ಮವರು, ಬೆಂಗಳೂರಿನವರು” ಎಂದು ಹೇಳಿದರು.

“ನಾನು ಬೆಂಗಳೂರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಹಾಸನದಿಂದ ಬಂದಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಇಲ್ಲಿಗೆ ಬಂದಾಗ ಇದು ಬೆಂಗಳೂರಾಗಿಯೇ ಇತ್ತು. ಅವರು ಪ್ರಧಾನಮಂತ್ರಿ, ಮುಖ್ಯಮಂತ್ರಿಯಾದಾಗಲೂ ಇದು ಬೆಂಗಳೂರಾಗಿಯೇ ಇತ್ತು. ಇದು ನಮ್ಮ ಜಿಲ್ಲೆ. ನಾವು ಭಾರತೀಯರು ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ, ಅದೇ ರೀತಿ ನಾವು ಬೆಂಗಳೂರಿನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಾಗ ಜಿಲ್ಲೆಯನ್ನು ಒಡೆದು ಬೇರೆ ಹೆಸರು ಕೊಟ್ಟರು” ಎಂದು ಅವರು ತಿಳಿಸಿದರು.

“ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದ್ದು ಬೆಂಗಳೂರಿನಲ್ಲಿ, ರಾಮಕೃಷ್ಣ ಹೆಗಡೆ ಅವರು ಬಂದು ನಿಂತಿದ್ದು ಬೆಂಗಳೂರಿನಲ್ಲಿ. ಈ ಬೆಂಗಳೂರು ನಾಲ್ಕೈದು ಮುಖ್ಯಮಂತ್ರಿಗಳನ್ನು ಮಾಡಿದೆ. ನಮ್ಮ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವಾಗ ಬೆಂಗಳೂರು ಹೆಸರು ಉಳಿಸಿಕೊಳ್ಳುವಂತೆ ನಾವು ಸಲಹೆ ನೀಡಿದ್ದೆವು. ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ನಮ್ಮ ಪೂರ್ವಜರು ಕೊಟ್ಟಿರುವ ಈ ಹೆಸರನ್ನು ನಾವು ಯಾಕೆ ಕಳೆದುಕೊಳ್ಳಬೇಕು” ಎಂದು ಪ್ರಶ್ನಿಸಿದರು.

“ಈ ಜಿಲ್ಲೆಯ ಆಡಳಿತ ಕೇಂದ್ರ ರಾಮನಗರದಲ್ಲೇ ಇರುತ್ತದೆ. ಈ ಜಿಲ್ಲೆಯ ಜನಕ್ಕೆ ಹೊಸ ದಿಕ್ಕನ್ನು ನೀಡಬೇಕು, ಹೊಸ ಆಲೋಚನೆ, ಅಭಿವೃದ್ಧಿ ನೀಡಬೇಕು, ಮುಂದಿನ ಪೀಳಿಗೆ ದೃಷ್ಟಿಯಿಂದ ನಾವು ಆಲೋಚನೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ನಮ್ಮ ಈ ತೀರ್ಮಾನಕ್ಕೆ ಪಕ್ಷಾತೀತವಾಗಿ ಜನರು ಸಂತೋಷವಾಗಿದ್ದಾರೆ” ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ 2028ರ ಒಳಗೆ ಬಂದು ಮತ್ತೆ ರಾಮನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂಬ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್, “ಅದು ಅವರ ಹಣೆಯಲ್ಲಿ ಬರೆದಿಲ್ಲ. 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ” ಎಂದು ಸವಾಲೆಸೆದರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!