Tue. Jul 22nd, 2025

ಕೆಎಎಸ್‌ ಮರು ಪರೀಕ್ಷೆ, ಕಾನ್‌ಸ್ಟೇಬಲ್‌ ವಯೋಮಿತಿ ಸಡಿಲಿಕೆ, ದಸರಾ ಉದ್ಘಾಟನೆಗೆ ಹಂ.ಪ. ನಾಗರಾಜಯ್ಯ

ಕೆಎಎಸ್‌ ಮರು ಪರೀಕ್ಷೆ, ಕಾನ್‌ಸ್ಟೇಬಲ್‌ ವಯೋಮಿತಿ ಸಡಿಲಿಕೆ, ದಸರಾ ಉದ್ಘಾಟನೆಗೆ ಹಂ.ಪ. ನಾಗರಾಜಯ್ಯ

ಮೈಸೂರು, ಸೆ. ೨೦:-ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು. ಈ ಸಂಬಂಧ ಮೈಸೂರು ಜಿಲ್ಲಾಡಳಿತ ಮತ್ತು ಮೈಸೂರು ಉಸ್ತುವಾರಿ ಸಚಿವರು ಅವರಿಗೆ ಶೀಘ್ರದಲ್ಲೇ ಅಧಿಕೃತ ಆಹ್ವಾನ ನೀಡಲಿದ್ದಾರೆ ಎಂದು ತಿಳಿಸಿದರು.

ಶಾಸಕ ಮುನಿರತ್ನ ವಿರುದ್ಧ ಪ್ರಕರಣಗಳು:
ಶಾಸಕ ಮುನಿರತ್ನ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಎಸ್‌ಐಟಿಗೆ (ವಿಶೇಷ ತನಿಖಾ ತಂಡ) ವಹಿಸಬೇಕೆಂದು ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಇಂದು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕೆಪಿಎಸ್‌ಸಿ ಮರು ಪರೀಕ್ಷೆ ಸೂಚನೆ:
ಕನ್ನಡ ಭಾಷಾಂತರದ ದೋಷದ ಹಿನ್ನೆಲೆಯಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯ ಮರು ಪರೀಕ್ಷೆಯನ್ನು ಆದಷ್ಟು ಶೀಘ್ರದಲ್ಲೇ ನಡೆಸುವಂತೆ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಕೆಪಿಎಸ್‌ಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ವಯೋಮಿತಿ ಹೆಚ್ಚಳ:
ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ವಯೋಮಿತಿಯನ್ನು 27 ವರ್ಷದಿಂದ 33 ವರ್ಷಕ್ಕೆ ಹೆಚ್ಚಿಸುವಂತೆ ವಯೋಮಿತಿ ಸಡಿಲಿಕೆ ಮಾಡಿ, ಈ ಸಂಬಂಧ ಗೃಹ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವಿಚಾರದಲ್ಲಿ ರಾಜ್ಯದ ಯುವ ಜನರಿಂದ ಒತ್ತಡದ ಹಿನ್ನೆಲೆ, ಸಮಾನತಾ ನಿಟ್ಟಿನಲ್ಲಿ ಒಮ್ಮೆಲೆ ಈ ವಯೋಮಿತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಇದನ್ನು ಓದಿ:- ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿ ಖಾತಾ ಅಪ್ಡೇಷನ್ ಕಾರ್ಯಕ್ಕೆ ಗಡುವು: ಸಚಿವ ಜಮೀರ್ ಅಹ್ಮದ್ ಖಾನ್

ಗಣೇಶೋತ್ಸವ ಮತ್ತು ಗಲಭೆ ಬಗ್ಗೆ ಸಿಎಂ ಪ್ರತಿಕ್ರಿಯೆ:
ಈ ಬಾರಿಯ ಗಣೇಶೋತ್ಸವದ ಸಂದರ್ಭ, ರಾಜ್ಯಾದ್ಯಂತ 60,000ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ದಾವಣಗೆರೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ನಾಗಮಂಗಲದಲ್ಲಿ ಗಲಭೆಗಳು ಸಂಭವಿಸಿವೆ. ಗಲಭೆಗಳ ಸಂದರ್ಭ ಪೊಲೀಸ್ ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದಿರುವುದರಿಂದ, ಡಿವೈಎಸ್ಪಿ ರನ್ನು ಅಮಾನತು ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ, “ಕೋಮು ಗಲಭೆಗಳಿಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ” ಎಂದು ಆರೋಪಿಸಿದರು. “ಸಮಾಜದಲ್ಲಿ ಶಾಂತಿ ಭಂಗಗೊಳ್ಳಿಸುವುದು, ತೊಂದರೆ ಉಂಟುಮಾಡುವುದು ಬಿಜೆಪಿ ಉದ್ದೇಶವಾಗಿದೆ,” ಎಂದು ಹೇಳಿದರು.

ಡಿನೋಟಿಫಿಕೇಷನ್ ಪ್ರಕರಣದ ತನಿಖೆ:
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆ. 2021ರಿಂದಲೂ ಲೋಕಾಯುಕ್ತ ಈ ತನಿಖೆಯನ್ನು ಪ್ರಾರಂಭಿಸಿಲ್ಲ. ನಿನ್ನೆ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಮತ್ತು ಸಂತೋಷ್ ಲಾಡ್ ಅವರಿಂದ ಬಿಡುಗಡೆಗಾದ ದಾಖಲೆಗಳ ಮೇಲೆ ಆಧಾರಿತ ತನಿಖೆ ನಡೆಯಬೇಕೆಂದು ಸಿಎಂ ಹೇಳಿದರು. “ಡಿನೋಟಿಫೈ ಮಾಡಿದ ಜಮೀನು ಬಹಳ ಬೆಲೆಬಾಳುವಂಥದ್ದಾಗಿದ್ದು, ಕುಮಾರಸ್ವಾಮಿಯವರು ತಮ್ಮ ಸಂಬಂಧಿಕರಿಗೆ ಈ ಜಮೀನನ್ನು ಮರುಬಾಗೀ ಮಾಡಿ ಅನುಚಿತವಾಗಿ ಬಳಸಿದ್ದಾರೆ,” ಎಂದು ಸಿಎಂ ಆರೋಪಿಸಿದರು.

ವಿಪಕ್ಷಗಳ ಬಗ್ಗೆ ಪ್ರತಿಕ್ರಿಯೆ:
ವಿಪಕ್ಷಗಳು ಸರ್ಕಾರದ ವಿರುದ್ಧ ಅಪಾಯಕಾರಿ ಆರೋಪಗಳನ್ನು ಮಾಡುತ್ತಿದ್ದು, ನಾವು ಯಾವುದೇ ಆರೋಪಗಳನ್ನು ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿಯವರನ್ನು ‘ಹಿಟ್ ಎಂಡ್ ರನ್’ ಗಿರಾಕಿ ಎಂದು ಕರೆದು, ಅವರು ತಮ್ಮ ಆರೋಪಗಳಿಗೆ ಯಾವತ್ತೂ ತಾರ್ಕಿಕ ಅಂತ್ಯ ಕಾಣಿಸುವುದಿಲ್ಲ ಎಂದರು. “ಕುಮಾರಸ್ವಾಮಿಯವರು ಕೇಂದ್ರದಲ್ಲಿ ಬೋಧನೆ ಮಾಡುವ ಸ್ಥಾನದಲ್ಲಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ಸತ್ಯಾಸತ್ಯತೆಗಳನ್ನು ಅರಿತು ಮಾತನಾಡಬೇಕು” ಎಂದು ಅವರು ಹೇಳಿದರು.


Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!