ಮಾರ್ಚ್ 19: ಉತ್ತರ ಕರ್ನಾಟಕ ಭಾಗದ ಅನೇಕ ಸಮಸ್ಯೆಗಳನ್ನು ರಾಜ್ಯ ವಿಧಾನಸಭೆಯಲ್ಲಿ ಅತ್ಯಂತ ಮಾರ್ಮಿಕವಾಗಿ ಪ್ರಸ್ತಾಪಿಸಿದವರು ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ
ವಿಷಾನಿಲದಿಂದ ಜೀವವಾಯು ತತ್ತರ
ಶರಣಗೌಡ ಕಂದಕೂರ ಅವರ ಪ್ರಕಾರ, ಕಡೇಚೂರ್-ಬಾಡಿಯಾಳ್ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ವಿವಿಧ ರಾಸಾಯನಿಕ ಫ್ಯಾಕ್ಟರಿಗಳು ಅವ್ಯಾಹತವಾಗಿ ವಿಷಪೂರಿತ ಅನಿಲವನ್ನು ವಾತಾವರಣಕ್ಕೆ ಹೊರಹಾಕುತ್ತಿದ್ದು, ಸುತ್ತಮುತ್ತಲಿನ ಗ್ರಾಮೀಣ ಜನಜೀವನವನ್ನು ದಟ್ಟ ಕಹಿ ಅನಿಲದ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿವೆ. ಅಲ್ಲಿನ ಜನರು ದಿನನಿತ್ಯ ಆ ವಿಷಾನಿಲವನ್ನು ಉಸಿರಾಡುತ್ತಲೇ ಗಂಭೀರ ಸ್ವರೂಪದ ಶ್ವಾಸಕೋಶದ ರೋಗಗಳು, ಚರ್ಮದ ಸಮಸ್ಯೆಗಳು ಹಾಗೂ ಕ್ಯಾನ್ಸರ್ ಮುಂತಾದ ಅಸಾಧ್ಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಉತ್ತರ ಕರ್ನಾಟಕಕ್ಕೆ ಮಾತ್ರ ವಿಷಾನಿಲ?”
ಸದನದಲ್ಲಿ ಮಾತನಾಡಿದ ಶಾಸಕರು, “ಒಳ್ಳೊಳ್ಳೆ ಕಾರ್ಖಾನೆಗಳಿಗಾದರೆ ದಕ್ಷಿಣ ಕರ್ನಾಟಕ, ವಿಷಾನಿಲ ಸೂಸುವ ಫ್ಯಾಕ್ಟರಿಗಳಿಗಾದರೆ ಉತ್ತರ ಕರ್ನಾಟಕ. ಇದ್ಯಾವ ಸೀಮೆ ನ್ಯಾಯ ಸ್ವಾಮಿ?” ಎಂದು ಪ್ರಶ್ನಿಸಿ, ಸರ್ಕಾರದ ನಿಯೋಜಿತ ಕೈಗಾರಿಕಾ ನೀತಿಯ ಮೇಲೆ ಗುಡುಗಿದರು. ದಕ್ಷಿಣ ಕರ್ನಾಟಕದಲ್ಲಿ ಇಂಧನ, ಟೆಕ್ಸಟೈಲ್, ತಂತ್ರಜ್ಞಾನ ಕೈಗಾರಿಕೆಗಳಂತಹ ವೃಧ್ಧಿಸಮೃದ್ಧ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಪರಿಸರಕ್ಕೆ ಮಾರಕವಾದ ರಾಸಾಯನಿಕ ಘಟಕಗಳು ಮಾತ್ರ ಸ್ಥಾಪನೆಯಾಗುತ್ತಿದ್ದು, ಜನಸಾಮಾನ್ಯರ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ
“ಉತ್ತರ ಕರ್ನಾಟಕದ ಜನರ ಆರೋಗ್ಯಕ್ಕೆ ಒತ್ತಡ ತರುತ್ತಿರುವ ಈ ಪರಿಸ್ಥಿತಿಯು ಬಹುತೇಕ ಸರ್ಕಾರದ ನಿರ್ಲಕ್ಷ್ಯದ ಫಲ” ಎಂದು ಕಂದ್ಕೂರ್ ಆರೋಪಿಸಿದರು. ರಾಸಾಯನಿಕ ಘಟಕಗಳ ತಪಾಸಣೆ, ಮಾಲಿನ್ಯ ನಿಯಂತ್ರಣ, ಮತ್ತು ಜನರ ಆರೋಗ್ಯ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ಕುರಿತು ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳದೇ ಜನರ ಬದುಕನ್ನು ಅಪಾಯದ ಅಂಚಿಗೆ ತಳ್ಳುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟ
“ಉತ್ತರ ಕರ್ನಾಟಕದ ಜನರು ಸ್ವಚ್ಛ ಹವಮಾನದಲ್ಲಿ ಉಸಿರಾಡುವ ಹಕ್ಕು ಪಡೆದಿಲ್ಲವೇ?” ಎಂದು ಪ್ರಶ್ನಿಸಿದ ಶಾಸಕರು, ಸರ್ಕಾರದ ನಿರ್ಲಕ್ಷ್ಯ ಹಾಗೂ ಕೈಗಾರಿಕಾ ನೀತಿಯ ಪುನರ್ ಪರಿಶೀಲನೆಗೆ ಒತ್ತಾಯಿಸಿದರು. ಕಡೇಚೂರ್-ಬಾಡಿಯಾಳ್ ಕೈಗಾರಿಕಾ ಪ್ರದೇಶದ ಪರಿಸರ ಮಾಲಿನ್ಯ ಕುರಿತು ಸಮಗ್ರ ತನಿಖೆ ನಡೆಸಿ, ಜನರ ಆರೋಗ್ಯ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಮನವಿ.
“ವಿಷಾನಿಲದ ವಿರುದ್ಧ ಸಮರವೇ ಅವಶ್ಯಕ” ಎಂದು ಹೋರಾಟಗಾರರು ಒತ್ತಾಯಿಸುತ್ತಿರುವ ಈ ಹಿನ್ನಲೆಯಲ್ಲಿ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.