Tue. Jul 22nd, 2025

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯ: ಸರ್ಕಾರದ ಹೊಸ ನಿರ್ಧಾರ

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯ: ಸರ್ಕಾರದ ಹೊಸ ನಿರ್ಧಾರ

ಬೆಂಗಳೂರು, ಫೆಬ್ರವರಿ 14:- ರಾಜ್ಯ ಸರ್ಕಾರವು ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ಮಹತ್ವದ ಶಿಕ್ಷಣೋದ್ದೇಶಿತ ತೀರ್ಮಾನ ಕೈಗೊಂಡಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಕಾರ, 2025-26

ಶೈಕ್ಷಣಿಕ ವರ್ಷದ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ 13 ವಾರಗಳ ಇಂಟರ್ನ್‌ಶಿಪ್ ಅಥವಾ ಕೈಗಾರಿಕಾ ಪ್ರಾಜೆಕ್ಟ್ ಕಡ್ಡಾಯಗೊಳಿಸಲಾಗುತ್ತಿದೆ.

ಈ ಹೊಸ ನಿರ್ಧಾರವನ್ನು ಸಿ-25 ಪಠ್ಯಕ್ರಮದಡಿ ಜಾರಿಗೆ ತರಲಾಗುತ್ತಿದೆ. ಈ ಪಠ್ಯಕ್ರಮವನ್ನು ರೂಪಿಸುವಾಗ ಕೈಗಾರಿಕಾ ವಲಯದ ಪ್ರತಿನಿಧಿಗಳ ಸಲಹೆಗಳನ್ನು ಪರಿಗಣಿಸಲಾಗಿದೆ. “ಇಂಟರ್ನ್‌ಶಿಪ್‌ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ದೊರೆಯಲಿದ್ದು, ಉದ್ಯೋಗ ಕ್ಷೇಮದಲ್ಲಿ ಸಹಕಾರಿಯಾಗಲಿದೆ” ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಮ ವಲಯದ ಅಭಿಪ್ರಾಯ ಕೋರಿದ ಸರ್ಕಾರ

ಪ್ರಸ್ತುತ, ಇಂಟರ್ನ್‌ಶಿಪ್ ಐಚ್ಛಿಕವಾಗಿದ್ದರೆ, ಇಂದಿನಿಂದ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಈ ನಿರ್ಧಾರ ಕೈಗೊಳ್ಳುವ ಮೊದಲು ತಾಂತ್ರಿಕ ಶಿಕ್ಷಣ ಇಲಾಖೆ ಉದ್ಯಮ ವಲಯದ ಅಭಿಪ್ರಾಯವನ್ನು ಕೋರಿದೆ. ಕೈಗಾರಿಕೆಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ 50,000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪರಿಣಾಮ

ಕರ್ನಾಟಕದಲ್ಲಿ 43 ಅನುದಾನಿತ, 107 ಸರ್ಕಾರಿ ಮತ್ತು 150 ಖಾಸಗಿ ಪಾಲಿಟೆಕ್ನಿಕ್‌ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 50,000 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹೊಸ ನೀತಿಯು ಈ ಎಲ್ಲ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಲಿದೆ.

ನೂತನ ಸಿ-25 ಪಠ್ಯಕ್ರಮದ ಪ್ರಮುಖ ತಿದ್ದುಪಡಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಿ-20 ಪಠ್ಯಕ್ರಮ ಜಾರಿಯಾಗಿತ್ತು. ಅದರಲ್ಲಿ ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ತೆಗೆದುಹಾಕಲಾಗಿತ್ತು ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಸಿ-25 ಪಠ್ಯಕ್ರಮವು ಸಂವಹನ ಕೌಶಲ್ಯ, ಕೋಡಿಂಗ್, ವೆಬ್ ಮತ್ತು ಅಪ್ಲಿಕೇಶನ್ ವಿನ್ಯಾಸದ ಕಡೆಗೆ ಹೆಚ್ಚಿನ ಒತ್ತನ್ನು ನೀಡಲಿದೆ. ಇದಲ್ಲದೆ, ಪರಿಸರ ವಿಜ್ಞಾನ ಮತ್ತು ಭಾರತೀಯ ಸಂವಿಧಾನವನ್ನು ಕೋರ್ಸ್‌ನ ಮೊದಲ ವರ್ಷದಲ್ಲಿ ಕಡ್ಡಾಯವಾಗಿ ಅಳವಡಿಸಲಾಗಿದೆ.

ಶೀಘ್ರದಲ್ಲೇ ಅಧಿಕೃತ ಆದೇಶ

ಈ ತಿದ್ದುಪಡಿಯ ಕರಡು ಪ್ರತಿ ಈಗಾಗಲೇ ಸಿದ್ಧಗೊಂಡಿದ್ದು, ಉದ್ಯಮ ವಲಯ ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿಕ್ರಿಯೆ ಪಡೆದು ಶೀಘ್ರದಲ್ಲೇ ಅಂತಿಮ ಆದೇಶ ಹೊರಡಿಸಲಾಗುವುದು. “ವಿದ್ಯಾರ್ಥಿಗಳು ಶೈಕ್ಷಣಿಕ ಮಟ್ಟದಲ್ಲಿ ಮಾತ್ರವಲ್ಲ, ಉದ್ಯೋಗಸ್ಥರಾಗಿ ಹೊರಹೊಮ್ಮಲು ಈ ಹೊಸ ತೀರ್ಮಾನ ನೆರವಾಗಲಿದೆ” ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!