ಯಾದಗಿರಿ, ಏಪ್ರಿಲ್ ೨೦:- ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ ಅನೇಕ ಮಹಿಳೆಯರ ಬದುಕಿಗೆ ಬೆಳಕು ನೀಡುತ್ತಿದೆ. ಇಂಥದ್ದೊಂದು ಪ್ರೇರಣಾದಾಯಕ ಉದಾಹರಣೆ ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಮುಮ್ತಾಜ್ ಬೇಗಂ ಎಂಬ ಮಹಿಳೆ.
ಕೂಲಿ ಕೆಲಸಮಾಡುತ್ತಾ ಬದುಕು ಸಾಗಿಸುತ್ತಿದ್ದ ಮುಮ್ತಾಜ್ ಬೇಗಂ ಅವರಿಗೆ, ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ದೊರಕಿದ ₹2000 ರೂಪಾಯಿಯ ಸಹಾಯಧನ ಬದಲಾವಣೆಯ ಬೀಜವಾಯಿತೆಂದು ಹೇಳಬಹುದು. ಆ ಹಣವನ್ನು ಸದುಪಯೋಗಪಡಿಸಿಕೊಂಡ ಮುಮ್ತಾಜ್ ಅವರು, ₹42,000 ರೂಪಾಯಿ ಜಮಾ ಮಾಡಿಕೊಂಡು ಇದೀಗ ತಮ್ಮದೇ ಆದ ಹೊಸ ಕಿರಾಣಿ ಅಂಗಡಿ ಆರಂಭಿಸಿದ್ದಾರೆ.
“ಇವತ್ತು ನನಗೆ ಒಳ್ಳೆ ದಿನ. ಗೃಹಲಕ್ಷ್ಮಿಯಿಂದ ಬಂದ ಹಣವನ್ನು ತಿಂಗಳು ತಿಂಗಳು ಜಮಾ ಮಾಡಿದೆ. ಆ ಹಣವನ್ನೇ ಬಳಸಿಕೊಂಡು ಅಂಗಡಿ ತೆರೆದು ನನ್ನ ಸ್ವಂತ ಕೆಲಸವನ್ನು ಆರಂಭಿಸಿದ್ದೇನೆ,” ಎಂದು ಸಂತೋಷದಿಂದ ಹೇಳಿದರು.
ಮಳೆ, ಬಿಸಿಲು, ಗಾಳಿಗೂ ಅಂಜದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮುಮ್ತಾಜ್ ಅವರಿಗೆ ಈ ಯೋಜನೆ ಆರ್ಥಿಕ ಹಾಗೂ ಮಾನಸಿಕ ನೆರೆವಿನಾಗಿ ಪರಿಣಮಿಸಿದೆ. “ಈ ಯೋಜನೆಯಿಂದ ನನಗೆ ಆತ್ಮವಿಶ್ವಾಸ ಬಂದಿದೆ. ಈಗ ನಾನು ಕೇವಲ ಬಡ ಮಹಿಳೆಯಲ್ಲ, ವ್ಯಾಪಾರಿಯಾಗಿದ್ದೇನೆ,” ಎಂದು ಹೆಮ್ಮೆಪಟ್ಟು ಹೇಳಿದರು.
ಅವರು ತಮ್ಮಂತೆಯೇ ಇತರ ಮಹಿಳೆಯರಿಗೂ ಈ ಯೋಜನೆಯ ಸದುಪಯೋಗ ಪಡೆಯುವಂತೆ ಸಲಹೆ ನೀಡಿದ್ದಾರೆ. “ನೀವು ಸಹ ಗೃಹಲಕ್ಷ್ಮಿಯಿಂದ ಸಿಗುವ ಹಣವನ್ನು ಸರಿಯಾಗಿ ಬಳಸಿದರೆ, ನಿಮ್ಮ ಬದುಕಿನ ಚಿಂತೆಗಳು ಕಡಿಮೆಯಾಗುತ್ತವೆ. ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬಹುದು,” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕಾರ್ ಅವರಿಗೆ ಧನ್ಯವಾದ ಸಲ್ಲಿಸಿದ ಮುಮ್ತಾಜ್ ಬೇಗಂ, “ಈ ಯೋಜನೆ ನೂರಾರು ಮಹಿಳೆಯರ ಬದುಕಿಗೆ ಬೆಳಕು ತಂದಿದೆ. ನನ್ನ ಬದುಕು ಬದಲಾಯಿಸಿದ ಈ ಯೋಜನೆಗೆ ನಾನು ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ,” ಎಂದು ಅಭಿಪ್ರಾಯಪಟ್ಟರು.

