ಯಾದಗಿರಿ ಅ 9: ನಗರದ ಪ್ರಾದೇಶಿಕ ಅರಣ್ಯ ವಲಯ ಇಲಾಖೆ ಕಚೇರಿಯಲ್ಲಿದ್ದ 38 ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ ಕಳ್ಳತನವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇಬ್ಬನ್ನು ಅಮಾನತು ಮಾಡಲಾಗಿದೆ.
ಉಪ ವಲಯ ಅರಣ್ಯಾಧಿಕಾರಿ ಚಂದ್ರಶಾ ನೀರಕಟ್ಟಿ ಹಾಗೂ ಗಸ್ತು ವನಪಾಲಕ ರಿಜ್ವಾನ್ ರಜಾ ಎಂಬುವವರನ್ನು ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸುನೀಲ್ ಪನ್ವಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅ.3ರಂದು ಇದರಲ್ಲಿ 18 ಲಕ್ಷ ಮೌಲ್ಯದ 88 ಕೆಜಿ ಶ್ರೀಗಂಧ ಕಟ್ಟಿಗೆಗಳು ಕಚೇರಿಯಿಂದಲೇ ಕಳ್ಳತನವಾಗಿದೆ. 14 ಕೆಜಿ ದಾಸ್ತಾನು ಅಲ್ಲೇ ಬಿಟ್ಟಿದ್ದರು. ಕಳ್ಳತನ ಮರೆಮಾಚಲು ಅಧಿಕಾರಿಗಳು ಅರಣ್ಯ ಪ್ರದೇಶದಿಂದ ಮತ್ತೊಂದು ಶ್ರೀಗಂಧದ ಗಿಡ ಕಡಿದು ಅದರ ಕಟ್ಟಿಗೆಗಳನ್ನು ಕಳ್ಳತನವಾಗಿರುವ ಜಾಗದಲ್ಲಿ ಇಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸೆ. 13ರಂದು 85 ಕೆಜಿ ಮತ್ತು ಸೆ.30 ರಂದು 17 ಕೆಜಿ ಸೇರಿದಂತೆ 102 ಕೆಜಿ ಶ್ರೀಗಂಧದ ಕಟ್ಟಿಗೆಯನ್ನು ಕಚೇರಿಯಲ್ಲಿ ಸಂಗ್ರಹಿಸಲಾಗಿತ್ತು. ತಾಲ್ಲೂಕಿನ ಬಾಲಗಮಡು- ಹಂದರಕಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಗಿಡಗಳನ್ನು ಕಳ್ಳರು ಸಾಗಿಸುತ್ತಿದ್ದವೇಳೆ ಅರಣ್ಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ಶ್ರೀಗಂಧದ ಕಟ್ಟಿಗೆಗಳು ಹಾಗೂ ಆರೋಪಿ ಸಚಿನ್‌ನನ್ನು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದಿದ್ದ ಕಟ್ಟಿಗೆಗಳನ್ನು ಯಾದಗಿರಿ ನಗರದ ಅರಣ್ಯ ಕಚೇರಿಯಲ್ಲಿ ಶೇಖರಿಸಿಡಲಾಗಿತ್ತು.
ಈ ಬಗ್ಗೆ ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸುನೀಲ್ ಪನ್ವಾರ್ ಪ್ರತಿಕ್ರಿಯಿಸಿ, ‘ಕಚೇರಿಯಲ್ಲಿನ ಶ್ರೀಗಂಧದ ಕಟ್ಟಿಗೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಪತ್ರ ಬರೆದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.
ಈ ಕುರಿತು ಯಾದಗಿರಿ ನಗರ ಠಾಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಲಕ್ಷ್ಮಣ ಎಂ. ಪ್ರಕರಣ ದಾಖಲಿಸಿದ್ದಾರೆ.

