ಜು ೧೦: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಜೈಲೂಟದಿಂದಾಗಿ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮನೆ ಊಟದ ಜೊತೆಗೆ ಹಾಸಿಗೆ, ಪುಸ್ತಕ ತರಿಸಿಕೊಳ್ಳಲು ಕೂಡ ನಟ ದರ್ಶನ್ ಕೋರಿದ್ದಾರೆ.
ಬಟ್ಟೆ, ಚಮಚ, ಮನೆಯಲ್ಲಿ ತಯಾರಿಸಿದ ಆಹಾರ, ಹಾಸಿಗೆ, ಪುಸ್ತಕ ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ಸೇವಿಸಿದಾಗ ಅತಿಸಾರ ಆಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಜೈಲಿನ ಆಹಾರ ದರ್ಶನ್‌ಗೆ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಅತಿಸಾರದಿಂದಾಗಿ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ.
ದರ್ಶನ್ ಜಾಮೀನಿಗಾಗಿ ವಕೀಲರು ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇನ್ನು ಕೆಲವಷ್ಟು ದಿನ ದರ್ಶನ್ ಜೈಲಿನಲ್ಲೆ ಇರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ ಎಂದಿದ್ದಾರೆ. ಜೈಲು ಅಧಿಕಾರಿಗಳು ಮನೆ ಊಟ, ಹಾಸಿಗೆ ನೀಡಲು ಅವಕಾಶ ನೀಡದೆ ತಿರಸ್ಕರಿಸಿದ್ದಾರೆ. ಜೈಲು ಅಧಿಕಾರಿಗಳ ನಿರಾಕರಣೆ ಕಾನೂನುಬಾಹಿರ, ಅಮಾನವೀಯ. ಹೀಗೇ ಮುಂದುವರಿದರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್ ಅನಾರೋಗ್ಯಕ್ಕೂ ಕಾರಣವಾಗಬಹುದು.
ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಹೀಗಾಗಿ ಹೈಕೋರ್ಟ್ ಮುಂದೆ ಬಂದು ಮನವಿ ಮಾಡೋದು ಹೊರತು ಪಡಿಸಿ ಬೇರೆ ದಾರಿ ಇಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ದರ್ಶನ್ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.

