ಯಾದಗಿರಿ , ಮೇ 28:-
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಗಳ ಪ್ರವಾಹದ ಅನುಭವದ ಆಧಾರದ ಮೇಲೆ ನದಿಯ ಗರಿಷ್ಠ ನೀರಿನ ಮಟ್ಟವನ್ನು ಈಗಲೇ ಗುರುತಿಸಬೇಕು ಎಂದು ಹೇಳಿದರು. ಈಗಾಗಲೇ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ನೇಮಕಿತ ತಂಡಗಳೊಂದಿಗೆ ಮುಂದಿನ ಎರಡು ದಿನಗಳಲ್ಲಿ ಭೀಮಾ ಮತ್ತು ಕೃಷ್ಣಾ ನದಿ ದಡದ 80ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ನದಿಯಲ್ಲಿ ಇಳಿಯದಂತೆ ಅರಿವು ಮೂಡಿಸಬೇಕೆಂದರು.
ಸಭೆಯಲ್ಲಿ ಭೀಮಾ ನದಿಯಿಂದ 35 ಹಾಗೂ ಕೃಷ್ಣಾ ನದಿಯಿಂದ 45 ಗ್ರಾಮಗಳು ಬಾಧಿತವಾಗುವ ಸಾಧ್ಯತೆ ಇದ್ದು, ನೀರಿನ ಹರಿವು, ಬ್ಯಾರೇಜ್‌ಗಳ ನೀರಿನ ಮಟ್ಟ, ಮತ್ತು ಎಚ್ಚರಿಕೆ ಸಂದೇಶಗಳ ಮೇಲೆ 24 ಗಂಟೆಗಳ ನಿಗಾವಹಿಸುವಂತೆ ಸೂಚಿಸಿದರು. ಡಿ-ಮಾರ್ಕೇಶನ್ ಮೂಲಕ ಗರಿಷ್ಠ ನೀರಿನ ಮಟ್ಟವನ್ನು ನಿಖರವಾಗಿ ಗುರುತಿಸಿ, ಸಂಬಂಧಿಸಿದ ಗ್ರಾಮ ಸಹಾಯಕರು, ಆಡಳಿತಾಧಿಕಾರಿಗಳು, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಬೀಟ್ ಪೋಲಿಸ್ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸುವಂತೆ ಸೂಚನೆ ನೀಡಲಾಯಿತು.
ಪ್ರವಾಹ ಪರಿಸ್ಥಿತಿಯಲ್ಲಿ ಜನ, ಜಾನುವಾರುಗಳ ಪ್ರಾಣ ಹಾನಿ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಈಗಲೇ ರೂಪಿಸಬೇಕು. ನುರಿತ ಈಜುಗಾರರನ್ನು ಗುರುತಿಸಿ, ಅವರನ್ನು ಸಿದ್ಧ ಸ್ಥಿತಿಯಲ್ಲಿ ಇರಿಸಬೇಕು. ಹಿರಿಯರು, ಗರ್ಭಿಣಿಯರು, ಮಕ್ಕಳಿಗೆ ಅಗತ್ಯ ಔಷಧಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕೆಂದರು.
ಮಳೆಗಾಲದ ಹಿನ್ನೆಲೆಯಲ್ಲಿ ಶುದ್ಧ ನೀರಿನ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಮನೆ ಹಾಗೂ ಬೆಳೆ ಹಾನಿ, ಪ್ರಾಣಹಾನಿ ಕುರಿತು ನೈಜ ವರದಿ ಸಲ್ಲಿಸಬೇಕೆಂದು ಸೂಚಿಸಿದರು. ಅಪಾಯಕಾರಿಯಾದ ಮರಗಳನ್ನು ಕಡಿದು ಹಾಕುವುದು, ಒಳಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಗುಡುಗು-ಮಿಂಚಿನಿಂದ ರಕ್ಷಣೆಗಾಗಿ ಮುನ್ನೆಚ್ಚರಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು ಮಾತನಾಡಿ, ನೋಡಲ್ ಅಧಿಕಾರಿಗಳು, ವಾಲಂಟಿಯರ್ಸ್, ಈಜುಗಾರರ ಪಟ್ಟಿ ಸಿದ್ಧವಾಗಿರಬೇಕು. ಬಿರುಕು ಬಂದ ಮನೆಗಳು, ಶಾಲಾ, ಅಂಗನವಾಡಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರವಾಹಕ್ಕೆ ಮೊದಲು ಹಾಗೂ ನಂತರ ಔಷಧಿ, ವೈದ್ಯರ ವ್ಯವಸ್ಥೆ ಹಾಗೂ ಅಂಟಿಸ್ನೇಕ್ ಬೈಟ್ ವ್ಯಾಕ್ಸಿನ್ ಖಚಿತಪಡಿಸಿಕೊಳ್ಳಬೇಕು ಎಂದರು. ಪಶುಗಳಿಗೆ ಒಣಮೇವಿನ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ ಸಿಇಓ ಲವೀಶ್ ಒರಡಿಯಾ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.