ಕಲಬುರಗಿ, ಸೆ.೨೦: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗಳ ಖಾತಾ ಅಪ್ಡೇಷನ್ ಕಾರ್ಯವನ್ನು ಮುಂದಿನ ಒಂದು ತಿಂಗಳೊಳಗೆ ಮುಗಿಸುವಂತೆ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿನ್ನೆ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಸುಧಾರಣೆ ಕಾರ್ಯದಲ್ಲಿ ವಿಳಂಬವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಇರುವ ಖಾತಾ ಅಪ್ಡೇಷನ್ ಕಾರ್ಯವನ್ನು ತಕ್ಷಣ ಮುಗಿಸಬೇಕು ಎಂದು ಹೇಳಿದರು. ಕಲಬುರಗಿ ಜಿಲ್ಲೆಯಲ್ಲಿ 2,566 ಕಂದಾಯ ಇಲಾಖೆ ವ್ಯಾಪ್ತಿಯ ಹಾಗೂ 572 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಕ್ಫ್ ಆಸ್ತಿಗಳು ಬಾಕಿ ಇವೆ. ಇದನ್ನು ಶೀಘ್ರ ಅಂತ್ಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ವಕ್ಫ್ ಆಸ್ತಿ ಓತ್ತುವರಿ ಸಮಸ್ಯೆ ಪರಿಹಾರಕ್ಕೆ ಸಹಕಾರ ಅಗತ್ಯ
ರಾಜ್ಯದಲ್ಲಿ 1.08 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಇದರಲ್ಲಿ 85 ಸಾವಿರ ಎಕರೆ ವಕ್ಫ್ ಆಸ್ತಿ ಓತ್ತುವರಿ ಆಗಿದೆ. ಕಲಬುರಗಿ ಜಿಲ್ಲೆಯಲ್ಲಿ 21,440 ಎಕರೆ ವಕ್ಫ್ ಆಸ್ತಿಗಳ ಪೈಕಿ 3,610 ಎಕರೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 6,194 ಎಕರೆ ಪೈಕಿ 123 ಎಕರೆ ವಕ್ಫ್ ಆಸ್ತಿ ಓತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಹಕಾರ ಅಗತ್ಯ ಎಂದು ಸಚಿವರು ಹೇಳಿದರು.
ಖಬರಸ್ತಾನ್ ಬೇಡಿಕೆಗಳ ಮಂಜೂರಾತಿಗೆ ಸೂಚನೆ
ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರಕ್ಕಾಗಿ ಸರಕಾರಿ ಜಮೀನು ದೊರೆಯದಿದ್ದರೆ, ಖಾಸಗಿ ಜಮೀನು ಖರೀದಿಸಿ ಖಬರಸ್ತಾನ್ ಸ್ಥಾಪನೆ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ಜಿಲ್ಲೆಯಲ್ಲಿ 23 ಖಬರಸ್ತಾನ್ ಬೇಡಿಕೆಗಳ ಪೈಕಿ 2 ಬೇಡಿಕೆಗಳನ್ನು ಮಂಜೂರು ಮಾಡಲಾಗಿದೆ, ಉಳಿದವು ಪರಿಶೀಲನೆಯಲ್ಲಿವೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ವಕ್ಫ್ ಅದಾಲತ್ ಪ್ರಗತಿ:
ಕಲಬುರಗಿಯಲ್ಲಿ ನಡೆದ ವಕ್ಫ್ ಅದಾಲತಿನಲ್ಲಿ 368 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 100 ಒತ್ತುವರಿ, 55 ಖಬರಸ್ತಾನ್ ಬೇಡಿಕೆ ಹಾಗೂ ಇತರ 213 ಅರ್ಜಿಗಳು ಭೂಮಿ ಮಂಜೂರಾತಿ ಮತ್ತು ಖಾತಾ ಅಪ್ಡೇಷನ್ ಸಮಸ್ಯೆಗಳ ಕುರಿತು ಸಲ್ಲಿಕೆಯಾಗಿವೆ.
ಸಮಾಲೋಚನೆಯಲ್ಲಿ ಹಾಜರಾತಿ:
ಸಭೆಯಲ್ಲಿ ವಕ್ಫ್ ಮಂಡಳಿಯ ಅಧ್ಯಕ್ಷ ಕೆ. ಅನ್ವರ್ ಭಾಷಾ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
- ಯಾದಗಿರಿ ಎಸ್ಎಸ್ಎಲ್ಸಿ ಫಲಿತಾಂಶ ಮತ್ತೆ ಕೊನೆ ಸ್ಥಾನ: ಶಿಕ್ಷಕರಿಗೆ ನೋಟಿಸ್
- ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ತಾತಪ್ಪನಿಗೆ ಮತ್ತೊಂದು ಶಾಕ್: ಬಾಲ್ಯವಿವಾಹ ಆರೋಪದಲ್ಲಿ ಸಂಕಷ್ಟ
- ಕೋಟ್ಯಾಂತರ ರೂ. ಖರ್ಚಾದರೂ ಕ್ರೀಡಾಂಗಣ ದರಿದ್ರಾವಸ್ಥೆ: ಯಾದಗಿರಿಯಲ್ಲಿ ಅನುದಾನ ಲೂಟಿ ಆರೋಪ!
- ಹೋನಗೇರಾ ಶಾಲೆಯ ದುಸ್ಥಿತಿ: ಶಿಥಿಲ ಕಟ್ಟಡ, ಸೌಲಭ್ಯಗಳ ಕೊರತೆ ನಡುವೆ ಜೀವ ಭಯದಲ್ಲಿ ನೂರಾರು ಮಕ್ಕಳ ಶಿಕ್ಷಣ
- ನದಿಗೆ ತಳ್ಳಿದ ಪ್ರಕರಣಕ್ಕೆ ಹೊಸ ತಿರುವು – ಪತಿ-ಪತ್ನಿ ಸಂಬಂಧಕ್ಕೆ ವಿಚ್ಛೇದನ ಅಂತ್ಯ