ಬೆಂಗಳೂರು, ಫೆಬ್ರವರಿ 18:
ಅಧಿಕಾರಿಗಳೊಂದಿಗೆ ಮಂಗಳವಾರ (ಫೆ.18) ನಡೆದ ವಿಡಿಯೋ ಸಂವಾದದಲ್ಲಿ ಅವರು, “ಅನಧಿಕೃತ ಬಡಾವಣೆಗಳಿಗೆ ಒಂದು ಬಾರಿ ಮಾತ್ರ ಬಿ-ಖಾತಾ ನೀಡಬೇಕು. ನಂತರ ಇಂತಹ ಗೊಂದಲಗಳಿಗೆ ಅವಕಾಶವಿಲ್ಲ. ಈ ಕಾರ್ಯವನ್ನು ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು” ಎಂದು ಹೇಳಿದ್ದಾರೆ.
ಅನಧಿಕೃತ ಬಡಾವಣೆಗಳ ವಿರುದ್ಧ ಹತ್ತಿಕ್ಕಲು ಕಾರ್ಯಚರಣೆ
ರಾಜ್ಯದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳು ನಿರ್ಬಂಧಿತಗೊಳ್ಳಬೇಕು. ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಸಮಸ್ಯೆ ಉಂಟಾಗಿದೆ. ಕಂದಾಯ ಕಟ್ಟದಿರುವುದು ಸ್ಥಳೀಯ ಸಂಸ್ಥೆಗಳಿಗೆ ಆದಾಯ ಕಡಿಮೆಯಾಗಲು ಕಾರಣವಾಗಿದೆ. ಇಂತಹ ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ, ಸಂಬಂಧಿಸಿದ ಜಿಲ್ಲಾಧಿಕಾರಿಗಳು, ನಗರ ಯೋಜನಾ ಅಧಿಕಾರಿಗಳು ಮತ್ತು ಮುಖ್ಯ ಅಧಿಕಾರಿಗಳು ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
“ನಾನು ಅಧಿಕಾರಿಗಳಿಗೆ ಮೂರು ತಿಂಗಳ ಗಡುವು ನೀಡುತ್ತೇನೆ. ಈ ಅವಧಿಯಲ್ಲಿ ಎಲ್ಲ ಅನಧಿಕೃತ ಬಡಾವಣೆಗಳನ್ನು ತಪಾಸಣೆ ಮಾಡಿ, ಎ-ಖಾತಾ ಅಥವಾ ಬಿ-ಖಾತಾ ನೀಡುವ ಪ್ರಕ್ರಿಯೆ ಪೂರೈಸಿ. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.
ಬಡವರ ಹಿತಕ್ಕೆ ಸರ್ಕಾರದ ನಿರ್ಧಾರ
ನಿವೇಶನ ಹೊಂದಿರುವ ಬಡವರು ಮತ್ತು ಮಧ್ಯಮ ವರ್ಗದ ಜನತೆ ಅನಾವಶ್ಯಕ ಕಾನೂನು ಗೊಂದಲಕ್ಕೊಳಗಾಗಬಾರದು. ಸರ್ಕಾರ ಅವರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳುತ್ತಿದೆ. “ನಾವು ಒಂದು ಬಾರಿ ಮಾತ್ರ ಪರಿಹಾರ ನೀಡುತ್ತಿದ್ದೇವೆ. ಈ ಚಾನ್ಸ್ ಬಳಸಿಕೊಂಡು, ಮೂರು ತಿಂಗಳೊಳಗೆ ಖಾತಾ ನಿರ್ವಹಣೆಯನ್ನು ಪೂರ್ಣಗೊಳಿಸಿ. ರಾಜ್ಯದ ಎಲ್ಲ ಬಡಾವಣೆಗಳಿಗೆ ಶಿಸ್ತು ತರಲು ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಸಿಎಂ ತಿಳಿಸಿದ್ದಾರೆ.
ಬ್ರೋಕರ್ಗಳಿಗೆ ಗೇಟ್ ಪಾಸ್, ಮಧ್ಯವರ್ತಿಗಳಿಗೆ ಎಚ್ಚರಿಕೆ
“ಬಡಾವಣೆಗಳ ಹೆಸರಲ್ಲಿ ಜನರನ್ನು ಮೋಸಗೊಳಿಸುತ್ತಿರುವ ಮಧ್ಯವರ್ತಿಗಳು ಮತ್ತು ಭೂ-ಬ್ರೋಕರ್ಗಳಿಗೆ ಗೇಟ್ ಪಾಸ್ ನೀಡಬೇಕು. ಈ ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರು ಯಾವುದೇ ಕಾರಣಕ್ಕೂ ಜನರ ದುರ್ಬಳಕೆ ಮಾಡಿಕೊಳ್ಳಬಾರದು” ಎಂದು ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಮಹತ್ವದ ವಿಡಿಯೋ ಸಂವಾದದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಇತರ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.