Tue. Jul 22nd, 2025

ಇದು ಜನತಾದರ್ಶನ ಅಲ್ಲ, ಜನಸ್ಪಂದನ ಎಂದ ಸಿಎಂ, ಅರ್ಜಿಗಳ ಇತ್ಯರ್ಥಕ್ಕೆ 15 ದಿನ ಗಡುವು

ಇದು ಜನತಾದರ್ಶನ ಅಲ್ಲ, ಜನಸ್ಪಂದನ ಎಂದ ಸಿಎಂ, ಅರ್ಜಿಗಳ ಇತ್ಯರ್ಥಕ್ಕೆ 15 ದಿನ ಗಡುವು

ನ ೨೮

: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಸತತ ಏಳು ಗಂಟೆಗಳ ಕಾಲ ಜನತಾದರ್ಶನ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿದರು. ಇಡೀ ದಿನ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳ ಇತ್ಯರ್ಥಕ್ಕೆ ಸಿಎಂ ಸಿದ್ದರಾಮಯ್ಯ ಅವರು 15 ದಿನ ಗಡುವು ನೀಡಿದ್ದಾರೆ.

ಇಂದು ನಡೆದ ಜನಸ್ಪಂದನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ಜನತಾ ದರ್ಶನ ಅಲ್ಲ. ಜನಸ್ಪಂದನ ಕಾರ್ಯಕ್ರಮ. ಇಂದು 3,500 ಅರ್ಜಿಗಳು ಬಂದಿವೆ. ಇನ್ನೂ ಜನರು ಬರುತ್ತಿದ್ದಾರೆ. ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿ ತಕ್ಷಣ ಪರಿಹಾರ ಕೊಡಬೇಕು. ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಅರ್ಜಿಗಳ ಇತ್ಯರ್ಥ ಆಗಬೇಕು. ಮತ್ತೆ ಜನಸ್ಪಂದನ ಮಾಡಿದಾಗ ಇಷ್ಟು ಅರ್ಜಿ ಬರಬಾರದು ಎಂದರು.

ನಾನು ಬೆಳಗ್ಗೆಯಿಂದಲೇ ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಖುದ್ದು ಆಲಿಸಿದ್ದೇನೆ. ಸ್ವೀಕೃತವಾಗಿರುವ ಎಲ್ಲ ಅರ್ಜಿಗಳ ಬಗ್ಗೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇಂದಿನ ಜನಸ್ಪಂದನಕ್ಕೆ ಉದ್ಯೋಗ ಬೇಡಿಕೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಆಗಮಿಸಿದ್ದು, ಸಾಧ್ಯವಾದ ಕಡೆಗಳಲ್ಲಿ ಉದ್ಯೋಗ ಹಾಗೂ ಮಾಸಾಶನ ಒದಗಿಸಲು ಸೂಚನೆ ನೀಡಲಾಗಿದೆ. ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಜನರ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಲಾಗಿದೆ. ಮೂರು ತಿಂಗಳ ನಂತರ ಮತ್ತೊಮ್ಮೆ ಜನಸ್ಪಂದನ ನಡೆಸಲಾಗುವುದು. ಆಗ ಈ ಪ್ರಮಾಣದಲ್ಲಿ ಜನರು ತಮ್ಮ ಸಮಸ್ಯೆಗಳೊಂದಿಗೆ ಬರದಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.

ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯಕೀಯ ವೆಚ್ಚ ಭರಿಸುವ ಮನವಿಗಳು  ಹೆಚ್ಚು ಸ್ವೀಕೃತವಾಗಿವೆ. ನಾನು ಮುಖ್ಯಮಂತ್ರಿಯಾದ ನಂತರ ಜನರ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಸುಮಾರು 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭಿಸುತ್ತದೆ ಎಂಬ ನಂಬಿಕೆಯಿಂದ ಜನರು ಸರ್ಕಾರಿ ಆಸ್ಪತ್ರೆ ಬಿಟ್ಟು, ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವ ಕಾರಣ, ಅವರ ವೈದ್ಯಕೀಯ ವೆಚ್ಚಗಳೂ ಹೆಚ್ಚಾಗುತ್ತವೆ. ಆ ವೆಚ್ಚದಲ್ಲಿ ಸಣ್ಣಪ್ರಮಾಣವನ್ನು ಸರ್ಕಾರ ಈ ರೀತಿ ಭರಿಸಲು ಪ್ರಯತ್ನಿಸುತ್ತಿದೆ ಎಂದು ಸಿಎಂ ಹೇಳಿದ್ದಾರೆ.

ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಮಸ್ಯೆ ಬಗೆಹರಿಸದೆ ಇದ್ದರೆ ದೊಡ್ಡದಾಗುತ್ತಲೇ ಹೋಗುತ್ತದೆ. ಬಹುತೇಕ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಅನೇಕ ಜನರು ಕೆಲಸ ಕೊಡಿಸಿ ಅಂತಾ ಕೇಳಿದ್ದಾರೆ. ವಿಕಲಚೇತನರಿಗೆ 4 ಸಾವಿರ ತ್ರಿಚಕ್ರ ವಾಹನ ನೀಡಲು ಸೂಚಿಸಿದ್ದೇನೆ ಎಂದರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!