ಜು೨೫: ಕೇಂದ್ರ ಸರ್ಕಾರದ ನೀಟ್ ಪರೀಕ್ಷಾ ವ್ಯವಸ್ಥೆ ಮತ್ತು “ಒನ್ ನೇಷನ್-ಒನ್ ಎಲೆಕ್ಷನ್” ತೀರ್ಮಾನಗಳನ್ನು ವಿರೋಧಿಸಿ, ಕರ್ನಾಟಕ ರಾಜ್ಯ ಸರ್ಕಾರವು ಮಂಡಿಸಿರುವ ನಿರ್ಣಯ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಈ ನಿರ್ಣಯವು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು, ಇದೀಗ ಅಧಿವೇಶನದಲ್ಲಿ ಮಂಡನೆಗೊಂಡು ಅಂಗೀಕಾರಗೊಂಡಿದೆ.
ವಿಧಾನಸಭೆಯಲ್ಲಿ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ನೀಟ್ ರದ್ದು ನಿರ್ಣಯವನ್ನು ಮಂಡಿಸಿದರು, ಹಾಗೂ ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅದನ್ನು ಮಂಡಿಸಿದರು. ವಿಧಾನಸಭೆಯಲ್ಲಿ “ಒನ್ ನೇಷನ್-ಒನ್ ಎಲೆಕ್ಷನ್” ವಿರುದ್ಧದ ನಿರ್ಣಯವನ್ನು ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದರು, ಮತ್ತು ವಿಧಾನ ಪರಿಷತ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಿದರು. ಉಭಯ ಸದನಗಳಲ್ಲೂ ಈ ನಿರ್ಣಯಗಳು ಅಂಗೀಕಾರವಾದವು.
ವಿಧಾನ ಪರಿಷತ್‌ನಲ್ಲಿ “ಒನ್ ನೇಷನ್-ಒನ್ ಎಲೆಕ್ಷನ್” ವಿರುದ್ಧ ನಿರ್ಣಯ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ, “ಈ ರೀತಿಯ ಚುನಾವಣೆಗೆ ನಮ್ಮ ವಿರೋಧ ಇದೆ. ಒಂದು ದೇಶ, ಒಂದು ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಮಾರಕ. ಏಕರೂಪ ಚುನಾವಣೆ ರಾಷ್ಟ್ರೀಯವಾಗಿ ಮತ್ತು ಸ್ಥಳೀಯವಾಗಿ ಹಲವು ತಾಂತ್ರಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಅನುಷ್ಠಾನ ಮಾಡಬಾರದು” ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಸದಸ್ಯರಿಗೆ ಮನವಿ ಮಾಡಿದರು.
ಇದನ್ನು ಓದಿ : ಕೇಂದ್ರ ಬಜೆಟ್: ರಾಜ್ಯಸಭೆಯಲ್ಲಿ ಪ್ರಖರ ಚರ್ಚೆ, “ಮಾತಾಜಿ ಅಲ್ಲ, ಮಗಳು” ಹೇಳಿಕೆ ವಿವಾದ
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ರದ್ದುಪಡಿಸುವ ಕುರಿತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಿಂದ ಆಗ್ರಹ ಕೇಳಿಬರುತ್ತಿದೆ. ನೀಟ್ ಯುಜಿ ಪರೀಕ್ಷೆಯ (NEET UG 2024) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾದ ನಂತರ ಈ ಆಗ್ರಹ ಮತ್ತಷ್ಟು ಬಲವಾಗಿದೆ. ಕರ್ನಾಟಕದಲ್ಲೂ, ಈ ಮೂರೂ ಕೇಂದ್ರ ಸರ್ಕಾರದ ತೀರ್ಮಾನಗಳನ್ನು ವಿರೋಧಿಸುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ನೀಟ್ ಪರೀಕ್ಷೆಯನ್ನು ರದ್ದುಪಡಿಸಿ, ಹಳೆಯ ಪ್ರವೇಶ ಪರೀಕ್ಷಾ ವ್ಯವಸ್ಥೆಗೆ ಮರಳಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ತಮಿಳುನಾಡಿನಂತೆಯೇ, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶವನ್ನು ನಡೆಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.
ನೀಟ್ ಅಕ್ರಮ ಪ್ರಕರಣ:
ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ 67 ವಿದ್ಯಾರ್ಥಿಗಳಲ್ಲಿ 44 ಮಂದಿ ಗ್ರೇಸ್ ಮಾರ್ಕ್ಸ್ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಹರಿಯಾಣದ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆಯಿತೆಂಬ ಆರೋಪಗಳು ವ್ಯಕ್ತವಾಗಿವೆ. ಗ್ರೇಸ್ ಮಾರ್ಕ್ಸ್ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್ ಮೈಂಡ್ ಅಮಿತ್ ಆನಂದ್ ಸೇರಿ ಹಲವರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ನೀಟ್ ಪರೀಕ್ಷೆಯ ವಿವರ:
2024, ಮೇ 5ರಂದು, ದೇಶಾದ್ಯಂತ 571 ನಗರಗಳು ಮತ್ತು 14 ವಿದೇಶಿ ನಗರಗಳಲ್ಲಿ 4750 ಕೇಂದ್ರಗಳಲ್ಲಿ ನೀಟ್ ಯುಜಿ ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಯಿತು. 24,06,079 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 23,33,297 ಪರೀಕ್ಷೆಗೆ ಹಾಜರಾಗಿದ್ದರು. 72782 ಮಂದಿ ಗೈರು ಹಾಜರಾಗಿದ್ದರು. ಈ ಪರೀಕ್ಷೆಯಲ್ಲಿ 10,29,154 ಮಂದಿ ಬಾಲಕರು, 13,76,831 ಮಂದಿ ಬಾಲಕಿಯರು, ಮತ್ತು 18 ತೃತೀಯ ಲಿಂಗಿಗಳು ಭಾಗವಹಿಸಿದ್ದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದರೂ, 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮರುಪರೀಕ್ಷೆ ಬೇಡವೆಂದು ಆದೇಶಿಸಿದೆ.