ಯಾದಗಿರಿ: ಮಾಜಿ ಸಚಿವ ರಾಜು ಗೌಡ (Raju Gowda) ಅವರು ಭೋವಿ ಅಭಿವೃದ್ಧಿ ನಿಗಮ (Karnataka Bhovi Development Corporation) ಹಗರಣದ ಕುರಿತು ತೀವ್ರ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಒಂದು ದಿನ ವಿಧಾನಸೌಧವನ್ನೇ ಜೈಲು ಮಾಡಲು ಸಮಯ ಬರುತ್ತದೆ. ಸರಿಯಾಗಿ ತನಿಖೆ ನಡೆದರೆ ಈ ಸರ್ಕಾರದ ಶೇಕಡಾ 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗುತ್ತಾರೆ. ಈ ಸರ್ಕಾರದಲ್ಲಿ ಒಬ್ಬ, ಇಬ್ಬರು ಅಲ್ಲ – ಅನೇಕರ ವಿರುದ್ಧ ಆರೋಪ ಸಾಬೀತಾಗಬಹುದು” ಎಂದು ಹೇಳಿದ್ದಾರೆ.
ರಾಜು ಗೌಡ ಮುಂದುವರಿಸಿ, “ರಾಜ್ಯದ ಎಲ್ಲ ನಿಗಮಗಳಲ್ಲಿ ಭ್ರಷ್ಟಾಚಾರ ಗೂಡು ಕಟ್ಟಿಕೊಂಡಿದೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಆದರೆ ಎಸ್ಐಟಿ ತನಿಖೆ ಕ್ಲಿನ್‌ಚಿಟ್ ಕೊಟ್ಟಿತು. ಆದರೆ ಭೋವಿ ನಿಗಮದಂತಹ ಸಂಸ್ಥೆಗಳಲ್ಲಿ ಮಾಡಿದರೆ ಇನ್ನೂ ದೊಡ್ಡ ಹಗರಣ ಬಯಲಾಗುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಅವರು, “ಜನಪ್ರತಿನಿಧಿಗಳಿಗಾಗಿ ವಿಶೇಷ ಕೋರ್ಟ್ ಇದ್ದಂತೆ, ಮುಂದೆ ವಿಶೇಷ ಜೈಲು ಮಾಡುವ ಪರಿಸ್ಥಿತಿ ಬರಬಹುದು” ಎಂದು ವ್ಯಂಗ್ಯವಾಡಿದರು.
ಬಾಲಕೃಷ್ಣ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ
ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂಬ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ರಾಜು ಗೌಡ, “ಕಾಂಗ್ರೆಸ್‌ನಲ್ಲಿ ಪ್ರಭಾವಿ ಎಸ್‌ಸಿ-ಎಸ್‌ಟಿ ಶಾಸಕರನ್ನು, ನಾಯಕರನ್ನು ತುಳಿಯುವ ಕೆಲಸ ನಡೆಯುತ್ತಿದೆ. ರಾಜಣ್ಣ ಸಾಮಾನ್ಯ ಕ್ಷೇತ್ರದಿಂದ ಗೆದ್ದ ಶಕ್ತಿಶಾಲಿ ನಾಯಕರು. ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಒಳಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬಾಲಕೃಷ್ಣ ಹಿರಿಯ ಶಾಸಕ, ಆದರೆ ಅವರು ನೀಡಿದ ಹೇಳಿಕೆಯ ಹಿಂದೆ ದೊಡ್ಡ ನಾಯಕರ ಕೈವಾಡವಿದೆ. ಬಾಲಣ್ಣ ಬ್ರೇನ್ ಮ್ಯಾಪಿಂಗ್ ಮಾಡಬೇಕಾದ ಸ್ಥಿತಿಯಲ್ಲಿದ್ದಾರೆ” ಎಂದು ಕಟುವಾಗಿ ಟೀಕಿಸಿದರು.
ಅವರು ಮತ್ತಷ್ಟು ಸೇರಿಸಿ, “ಬಾಲಣ್ಣರಿಗೆ ವರ್ಷಗಳಿಂದ ಮಂತ್ರಿಯಾಗಬೇಕು, ಬಿಡಿಎ ಚೇರ್‌ಮನ್ ಆಗಬೇಕು ಎಂಬ ಕನಸು ಇದೆ. ಅದಕ್ಕಾಗಿ ಇಂತಹ ಹೇಳಿಕೆ ನೀಡಿದ್ರೆ ಅಧಿಕಾರ ಸಿಗುತ್ತದೆ ಎಂಬ ಭಾವನೆ ಮಾಡಿದ್ದಾರೆ. ಆದರೆ ಇಂತಹ ನಾಟಕಗಳು ಶಾಶ್ವತವಾಗುವುದಿಲ್ಲ. ಇಂದು ರಾಜಣ್ಣನಿಗೆ ಬಂದಿರುವ ಪರಿಸ್ಥಿತಿ, ನಾಳೆ ನಿಮಗೂ ಬರುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು.

