Mon. Jul 21st, 2025

ಭೀಮಾ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ರಿಪೇರಿ ಕಾರ್ಯ ಪೂರ್ಣ: ಮಾ.23ರಿಂದ ಸಂಚಾರಕ್ಕೆ ಆರಂಭ!

ಭೀಮಾ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ರಿಪೇರಿ ಕಾರ್ಯ ಪೂರ್ಣ: ಮಾ.23ರಿಂದ ಸಂಚಾರಕ್ಕೆ ಆರಂಭ!

ಯಾದಗಿರಿ ಮಾ ೧೫:-

ಭೀಮಾ ನದಿಗೆ ಅಡ್ಡಲಾಗಿ ಇರುವ ಹಳೆಯ ಸೇತುವೆ ಹಾಗೂ ರೈಲ್ವೆ ಮೇಲ್ಸೇತುವೆ (ಬ್ರಿಡ್ಜ್) ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ 23 ರಿಂದ ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗಲಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ತಿಳಿಸಿದ್ದಾರೆ. ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಗುಣಮಟ್ಟದ ಕೆಲಸ, ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಂಡ ಕಾಮಗಾರಿ
ಭೀಮಾ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆಯ ದುರಸ್ತಿ ಕಾರ್ಯ ವಿಳಂಬವಾದರೂ, ಕಾಮಗಾರಿ ಗುಣಮಟ್ಟದ ಬಗ್ಗೆ ತಾಂತ್ರಿಕ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸೇತುವೆಯ ಮೇಲಿನ ಸಿಸಿ ರಸ್ತೆ ಪೂರ್ಣಗೊಂಡಿದ್ದು, ಇದೀಗ ಕ್ಯೂರಿಂಗ್ ಕಾರ್ಯ ಪ್ರಗತಿಯಲ್ಲಿ ಇದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ನೀರು ಸರಾಗವಾಗಿ ಹರಿದು ಹೋಗಲು ಹೋಲ್‌ಗಳ ಮೂಲಕ ಸ್ಟೀಲ್ ರಾಡ್ಸ್ ಅಳವಡಿಸಲು ಸೂಚನೆ ನೀಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧಿಕ ಮಳೆಯಿಂದ ಹಾನಿಗೊಂಡ ಸೇತುವೆ, ಪುನರ್ ನಿರ್ಮಾಣದ ಅವಶ್ಯಕತೆ
ಈ ವರ್ಷ ಹೆಚ್ಚಿನ ಮಳೆಯಾಗಿ ಸುಮಾರು 100 ವರ್ಷ ಹಳೆಯ ಸೇತುವೆ ತೀವ್ರ ಹಾನಿಗೊಂಡಿತ್ತು. ತಗ್ಗು ಗುಂಡಿಗಳು ಬಿದ್ದು ಜನಸಂಚಾರಕ್ಕೆ ತೊಂದರೆಯಾದ್ದರಿಂದ, ವಿವಿಧ ಸಂಘ-ಸಂಸ್ಥೆಗಳ ಒತ್ತಡಕ್ಕೆ ಒಳಗಾಗಿ ಸರ್ಕಾರದ ಗಮನ ಸೆಳೆದು ಈ ಸೇತುವೆ ದುರಸ್ಥಿಗೊಳಿಸಲಾಗಿದೆ. ಜನಸಂಪರ್ಕಕ್ಕೆ ಇದು ತುಂಬಾ ಮಹತ್ವದ್ದಾಗಿರುವುದರಿಂದ, ಮುಂದಿನ ವಾರದಲ್ಲಿ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಹೇಳಿದರು.

ರೂ. 2 ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಮೇಲ್ಸೇತುವೆ ದುರಸ್ತಿ
ಭೀಮಾ ಸೇತುವೆ ದುರಸ್ತಿ ಕಾರ್ಯಕ್ಕೆ ಒಟ್ಟು ರೂ. 1 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ರೈಲ್ವೆ ಮೇಲ್ಸೇತುವೆಯ ಪೇಚಿಂಗ್ ಕಲ್ಲು ಮತ್ತು ಸೈಡ್ ವಾಲ್‌ಗಳನ್ನು ಅಳವಡಿಸಲು ಇನ್ನೊಂದು ಕೋಟಿ ರೂ. ಮೀಸಲಾಗಿತ್ತು. ಈ ಕಾರ್ಯಗಳೆಲ್ಲವೂ ಈಗ ಮುಕ್ತಾಯಗೊಂಡಿವೆ ಎಂದು ಶಾಸಕರು ವಿವರಿಸಿದರು.

ಹೊಸ ಸೇತುವೆ ನಿರ್ಮಾಣದ ಚಿಂತನೆ
ಪ್ರಸ್ತುತ ಭೀಮಾ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ಪುರಾತನವಾಗಿರುವ ಕಾರಣ, ಜನಸಂಚಾರ ಸುಗಮವಾಗಿಸಲು ಹೊಸ ಸೇತುವೆ ನಿರ್ಮಾಣದ ಬಗ್ಗೆ ಚಿಂತನೆ ನಡೆದಿದೆ. ನೂರಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಲು ಜನರ ಬೇಡಿಕೆ ಹೆಚ್ಚಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಶಾಸಕರು ಹೇಳಿದರು. ಹೊಸ ಸೇತುವೆಯ ಅಂದಾಜು ವೆಚ್ಚ ತಯಾರಿಸಿ ಶೀಘ್ರದಲ್ಲೇ ಸಲ್ಲಿಸಲು ಸೂಚನೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಗುತ್ತಿಗೆದಾರ ಸುದರ್ಶನ ನಾಯ್ಕ್, ಕಾಂಗ್ರೆಸ್ ಮುಖಂಡರು ವೆಂಕಟರೆಡ್ಡಿ ವನಕೇರಿ, ಲಚಮ ರೆಡ್ಡಿ, ಮಲ್ಲಿಕಾರ್ಜುನ ಈಟೆ, ಸುರೇಶ ಮಡ್ಡಿ, ಶರಣಗೌಡ ಬಲಕಲ್, ಕಿಸ್ಟೋಪರ ಬೆಳ್ಳಿ, ಗುಲಾಮ ಮುರ್ತುಜಾ, ಅಮರೇಶ ಜಾಕಾ, ಲೋಕೋಪಯೋಗಿ ಇಲಾಖೆ ಎಇಇ ಶ್ರೀಧರ ಮತ್ತು ಹಲವಾರು ಸ್ಥಳೀಯ ನಾಯಕರು ಹಾಜರಿದ್ದರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!