Sun. Mar 29th, 2026

ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಅವರ ಕಾಳಜಿಯಿಂದ ಮಾನಸಿಕ ಅಸ್ವಸ್ಥೆಗೆ ಹೊಸ ಬದುಕಿನ ಬೆಳಕು

ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಅವರ ಕಾಳಜಿಯಿಂದ ಮಾನಸಿಕ ಅಸ್ವಸ್ಥೆಗೆ ಹೊಸ ಬದುಕಿನ ಬೆಳಕು

ಯಾದಗಿರಿ ಸೇ ೧೨: ನಗರದಲ್ಲಿ ಹಲವು ದಿನಗಳಿಂದ ಮಳೆ-ಚಳಿ ಎನ್ನದೆ ಬೀದಿಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದ ನಿರ್ಗತಿಕ ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬಳು ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಅವರ ತಕ್ಷಣದ ಕಾಳಜಿ ಮತ್ತು ಮಾನವೀಯ ಸ್ಪಂದನೆಯಿಂದ ಹೊಸ ಬದುಕಿಗೆ ಕಾಲಿಟ್ಟಿದ್ದಾಳೆ.

ನಗರದ ಬೀದಿ ಬದಿಯಲ್ಲಿ ಅಲೆಯುತ್ತಿದ್ದ ಆ ಮಹಿಳೆಯ ದಯನೀಯ ಸ್ಥಿತಿಯನ್ನು ಸಾರ್ವಜನಿಕರು ನಗರಸಭೆ ಅಧ್ಯಕ್ಷೆಯ ಗಮನಕ್ಕೆ ತಂದ ತಕ್ಷಣವೇ, ಅವರು ಯಾವುದೇ ವಿಳಂಬವಿಲ್ಲದೆ ಸ್ಪಂದಿಸಿದರು. ಅಧ್ಯಕ್ಷೆ ಅವರು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಸಮುದಾಯ ಸಂಘಟನಾ ಅಧಿಕಾರಿ ಭೀಮಣ್ಣ ಕೆ. ವೈದ್ಯ ಹಾಗೂ ಸಿಆರ್ಪಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿ ಆ ಮಹಿಳೆಯನ್ನು ಸುರಕ್ಷಿತವಾಗಿ ಆರೈಕೆ ಕೇಂದ್ರಕ್ಕೆ ಸೇರಿಸುವಂತೆ ಸೂಚಿಸಿದರು.

ನಂತರ ಮಹಿಳೆಯನ್ನು ನಗರದ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ಆರಂಭದಲ್ಲಿ ಕಂಡ ದೃಶ್ಯ ಅತ್ಯಂತ ನೋವುಂಟುಮಾಡುವಂತಿತ್ತು. ಹರಕಲು ಬಟ್ಟೆ ತೊಟ್ಟಿದ್ದಳು, ಕೂದಲು ಗಂಟು ಕಟ್ಟಿಕೊಂಡು ಮಾಸಿ ಹೋಗಿತ್ತು, ದೈಹಿಕವಾಗಿಯೂ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಳು. ಆ ಸ್ಥಿತಿಯಲ್ಲಿ ಆಕೆಯ ಸಮೀಪಕ್ಕೂ ಜನರು ಹೋಗಲು ಹೆದರುತ್ತಿದ್ದರು. ಆದರೆ ಆಶ್ರಯ ಕೇಂದ್ರದ ಸಿಬ್ಬಂದಿ ಆಕೆಯನ್ನು ಮಮತೆಯಿಂದ ಸ್ವೀಕರಿಸಿದರು.

ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ದೊಡ್ಡಮನಿ, ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಾ, ಕೇರ್‌ಟೇಕರ್ ದೇವಮ್ಮ ಹಾಗೂ ಸಿಬ್ಬಂದಿ ವರ್ಗದವರು ಆಕೆಯ ತಲೆ ಕೂದಲು ಕತ್ತರಿಸಿ, ಸ್ನಾನ ಮಾಡಿಸಿ, ಸ್ವಚ್ಛ ಮತ್ತು ಸುಂದರವಾದ ಬಟ್ಟೆಗಳನ್ನು ತೊಡಿಸಿದರು. ಆಕೆಯ ದಿನನಿತ್ಯದ ಆರೈಕೆಗಾಗಿ ಬೇಕಾದ ವ್ಯವಸ್ಥೆಗಳನ್ನು ಕೂಡಾ ಕಲ್ಪಿಸಿದರು. ಇದರಿಂದ ಬೀದಿ ಬೀದಿಗಳಲ್ಲಿ ಅಲೆಮಾಡುತ್ತಿದ್ದ ಆ ನಿರ್ಗತಿಕ ಮಹಿಳೆ ಇಂದು ಸಾಮಾನ್ಯ ಜನರಂತೆ ಹೊಸ ಬದುಕಿಗೆ ಕಾಲಿಟ್ಟಿದ್ದಾಳೆ.

ಈ ಕ್ರಮವು ಮಾನವೀಯತೆ ಇನ್ನೂ ಬದುಕಿದೆ ಎಂಬುದಕ್ಕೆ ನಿದರ್ಶನವಾಗಿದೆ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗಿ, ಆರ್ಥಿಕ-ಮಾನಸಿಕವಾಗಿ ಕುಗ್ಗಿ ಹೋದ ಆ ಮಹಿಳೆಯ ಜೀವನವನ್ನು ಮರುಸಂರಚಿಸಲು ನಗರಸಭೆ ಹಾಗೂ ಆಶ್ರಯ ಕೇಂದ್ರದ ಸಿಬ್ಬಂದಿ ಕೈಗೊಂಡ ಹೆಜ್ಜೆ ಶ್ಲಾಘನೀಯವಾಗಿದೆ.

ಮುಗ್ದ ಮನಸ್ಸಿನ ಆ ಮಹಿಳೆ ಅಸಹಾಯಕರಾಗಿ ಮಾನಸಿಕ ನೋವು ಮಾತ್ರವಲ್ಲದೆ ದೈಹಿಕ ಹಿಂಸೆ, ರೋಗಪೀಡನೆಯ ಸಂಕಟಗಳನ್ನು ಸಹಿಸುತ್ತಿದ್ದಳು. ಪ್ರತಿದಿನ ಅಜ್ಞಾತ ಹೋರಾಟ ನಡೆಸುತ್ತಿದ್ದಳು. ಆದರೆ ಈಗ ಆ ಸಂಕಷ್ಟದ ಬಾವುಟದಿಂದ ಮುಕ್ತಿ ಪಡೆದು ಹೊಸ ಭರವಸೆಯ ಬದುಕನ್ನು ಪ್ರಾರಂಭಿಸಿದ್ದಾಳೆ.

ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಅವರ ಮಾನವೀಯ ಕಾಳಜಿ ಮತ್ತು ಭಾರತಾಂಬೆ ಸಂಸ್ಥೆಯ ನಿಸ್ವಾರ್ಥ ಸೇವೆ ಅನೇಕ ಜನರ ಹೃದಯಗಳನ್ನು ಮುಟ್ಟಿದೆ. ಇದು ಸಮಾಜದಲ್ಲಿ ನಿರ್ಗತಿಕರ ಬದುಕು ಬದಲಿಸಲು ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯದ ಮಟ್ಟಿಗೆ ಕೈಜೋಡಿಸಬೇಕೆಂಬ ಸಂದೇಶ ನೀಡಿದೆ.

Related Post

Leave a Reply

Your email address will not be published. Required fields are marked *

error: Content is protected !!