ಅ ೨೬: ರಾಷ್ಟ್ರಪಕ್ಷಿ ನವಿಲುಗಳನ್ನು ಬೇಟೆಯಾಡಿ ಅದರ ಮಾಂಸ ತಿನ್ನುತ್ತಿದ್ದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತುಮಕೂರು ತಾಲ್ಲೂಕಿನ ಮಾರನಾಯಕನಪಾಳ್ಯದಲ್ಲಿ ಈ ಕೃತ್ಯವೆಸಗಿದವರು ಈಗ ಸೆರೆಯಾಗಿದ್ದಾರೆ.
ಮಾರನಾಯಕನಹಳ್ಳಿ ಭಾಗದಲ್ಲಿ ನವಿಲುಗಳು ಹೆಚ್ಚಾಗಿರುವುದರಿಂದ ಇವರು ಕೈಗೆ ಬಲು ಸುಲಭವಾಗಿ ಸಿಗುತ್ತಿದ್ದವು. ಕಳೆದ ಹಲವು ದಿನಗಳಿಂದ ನವಿಲುಗಳನ್ನು ಕೊಂದು ತಿನ್ನುತ್ತಿದ್ದ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 1.5 ಕೆಜಿ ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲು, ಬೇಯಿಸಿದ ಮಾಂಸ ಹಾಗೂ ನವಿಲು ಹಿಡಿಯಲು ಬಳಸುತ್ತಿದ್ದ ಬಲೆಗಳು, ಉರುಳುಗಳು, ಮಾಂಸ ಬೇಯಿಸಿದ್ದ ಪಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಎಂಬುವವರು ಬಂಧಿತ ಆರೋಪಿಗಳು. ಇವರೆಲ್ಲರೂ ಒಡಿಶಾ ರಾಜ್ಯದವರು ಎನ್ನಲಾಗಿದೆ. ಇವರು ಮಾರನಾಯಕನ ಪಾಳ್ಯದಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನವಿಲು ಮಾಂಸದ ರುಚಿಗೆ ಬಿದ್ದಿದ್ದ ಇವರು ರಾಷ್ಟ್ರ ಪಕ್ಷಿಗಳ ಪ್ರಾಣಕ್ಕೆ ಸಂಚಕಾರ ತರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಕ್ಕೆ ಪಡೆದ ಮಾಂಸವನ್ನು ಅರಣ್ಯಾಧಿಕಾರಿಗಳು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

