ಸುರಪುರ ಪೊಲೀಸ್ ಉಪ ವಿಭಾಗದಾದ್ಯಂತ ಮಟಕಾ, ಜೂಜಾಟ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ ಜಾವೇದ್ ಇನಾಮದಾರ್ ತಿಳಿಸಿದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ವಿಭಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಕ್ಲಬ್ಗಳನ್ನು ಬಂದ್ ಮಾಡಿಸಲಾಗಿದೆ. ಪೊಲೀಸ್ ಕಣ್ತಪಸಿ ಮಟಕಾ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸುರಪುರ ನಗರದಲ್ಲಿ ರಸ್ತೆಗಳು ಇಕ್ಕಟಾಗಿವೆ.
ಗಾಂಧಿ ವೃತ್ತ,ಬಸ್ ನಿಲ್ದಾಣ ರಸ್ತೆ, ತಹಸಿಲ್ ರಸ್ತೆ, ಮುಖ್ಯ ರಸ್ತೆಗಳಲ್ಲಿ ಮೇಲಿಂದ ಮೇಲೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಅಡೆತಡೆಯಾಗುತ್ತಿದೆ. ಸಂಚಾರಕ್ಕೆ ಕಾರಣ ಬೀದಿ ಬದಿಯ ವ್ಯಾಪಾರಿಗಳು ರಸ್ತೆ ಬಿಟ್ಟು ವಹಿವಾಟು ನಡೆಸಬೇಕು. ಸಂಚಾರಕ್ಕೆ ತೊಂದರೆಯಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಗರದಲ್ಲಿ ಬಂದಾಗಿರುವ ಸಿಸಿ ಕ್ಯಾಮರಾಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ದುರಸ್ತಿ ಮಾಡಿಸಿ ಪ್ರಾರಂಭಿಸಲಾಗುವುದು. ಇಲ್ಲಿಯ ಬಸ್ ನಿಲ್ದಾಣ, ಗಾಂಧಿ ವೃತ್ತ, ಪಟೇಲ್ ವೃತ್ತ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆಗೆ ಕ್ರಮಕೈಗೊಳ್ಳಲಾಗುವುದು. ಎಲ್ಲ ವ್ಯಾಪಾರಸ್ಥರು ರಾತ್ರಿ 10 ಗಂಟೆ ಒಳಗಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಬೇಕು. ನಿಯಮ ಮೀರಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.