“17ರ ಹರೆಯದ ಯುವ ಶಿಲ್ಪಿ 101 ಕೆಜಿ ಸಂಗ್ರಾಣಿ ಕಲ್ಲು ಎತ್ತಿ ಜಿಲ್ಲಾ ಕೀರ್ತಿ ಸಾಧನೆ – ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ್ ರೆಡ್ಡಿ ಮಾಲಿ ಪಾಟೀಲ್ ಹರ್ಷ ವ್ಯಕ್ತಪಡಿಸಿದರು”
ಯಾದಗಿರಿ : (ಗಡೆಸೂಗೂರು) ಕೌಳೂರು ಗ್ರಾಮದ 17 ವರ್ಷದ ಯುವಕ ಬಸಲಿಂಗ ದೊಡ್ಡ ಭೀಮಪ್ಪ ಕೌಳೂರು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಅಪಾರ ಶಕ್ತಿ ಪ್ರದರ್ಶಿಸಿ ಗ್ರಾಮದ ಹೆಸರು ಜಿಲ್ಲೆಯ ಮಟ್ಟದಲ್ಲಿ ಗೌರವದಿಂದ ಓಂಗುವಂತೆ ಮಾಡಿದ್ದಾರೆ. ಒಂದು ಕಾಲದಲ್ಲಿ ಹಳ್ಳಿಯ ಜಾತ್ರೆಯ ಜೀವಾಳವಾಗಿದ್ದ ಕಲ್ಲು ಎತ್ತುವ ಸ್ಪರ್ಧೆಗಳು ಈಗ ವಿರಳವಾಗುತ್ತಿದ್ದರೂ, ಬಸಲಿಂಗನಂತಹ ಯುವಕರು ಈ ಹಳ್ಳಿಯ ಪಾರಂಪರಿಕ ಕಲೆಗಳನ್ನು ಜೀವಂತವಾಗಿಟ್ಟುಕೊಳ್ಳುತ್ತಿದ್ದಾರೆ.
ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಸಲಿಂಗ ಅನೇಕ ಜಾತ್ರೆಗಳಲ್ಲಿ ಪಾಲ್ಗೊಂಡು ಭಾರವಾದ ಸಂಗ್ರಾಣಿ ಕಲ್ಲುಗಳನ್ನು ಎತ್ತುವ ಮೂಲಕ ಈಗಾಗಲೇ ಜನರಿಂದ ಬೆಳ್ಳಿ ಕಡಗಗಳಂತಹ ಅನೇಕ ಬಹುಮಾನಗಳನ್ನು ಪಡೆದಿದ್ದಾನೆ. ತಾನು 101 ಕೆಜಿ ತೂಕದ ಸಂಗ್ರಾಣಿ ಕಲ್ಲನ್ನು ಎತ್ತಿದ ಕ್ಷಣದಲ್ಲಿ ಕೊಂಡಾಡಲು ಹಳ್ಳಿಯ ಜನಸಾಗರ ಹುಚ್ಚೆದ್ದಿತ್ತು. ಇದು ಸಾಮಾನ್ಯ ಸಾಧನೆಯಲ್ಲ; ದೈಹಿಕ ಶಕ್ತಿಗೂ, ಮಾನಸಿಕ ಸ್ಥೈರ್ಯಕ್ಕೂ ತಕ್ಕ ಉದಾಹರಣೆ.
ಬಸಲಿಂಗನ ತಂದೆ ದೊಡ್ಡ ಭೀಮಪ್ಪ ಕೌಳೂರು ಮಾತನಾಡುತ್ತಾ, “ಮಗನು ಬಾಲ್ಯದಿಂದಲೇ ಆಟವಾಡುವುದಕ್ಕಿಂತ ಕಲ್ಲು ಎತ್ತುವುದರಲ್ಲೇ ಆಸಕ್ತಿ ತೋರಿಸುತ್ತಿದ್ದ. ಹಳ್ಳಿಯ ಹಿರಿಯರನ್ನು ನೋಡಿ ಪ್ರೇರೇಪಿತನಾಗಿ, ಪ್ರತಿದಿನವೂ ತರಬೇತಿ ಮಾಡಿಕೊಂಡು ದೈಹಿಕ ಕಸರತ್ತು ಮಾಡುತ್ತಿದ್ದ. ಇವನು ಈಗ ನೂರಕ್ಕೂ ಹೆಚ್ಚು ಜಾತ್ರೆಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದಾನೆ” ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.
ಹಳ್ಳಿಯ ಹಿರಿಯರು ಆಳುವ ನೆನಪುಗಳನ್ನು ಹಂಚಿಕೊಳ್ಳುತ್ತಾ, “ಹಳೆಯ ದಿನಗಳಲ್ಲಿ ಜಾತ್ರೆ ಎಂದರೆ ಕಲ್ಲು ಎತ್ತುವ ಬಿರುಸು ಸ್ಪರ್ಧೆಗಳು, ಉಸುಕಿನ ಚೀಲ ಎತ್ತುವ ಆಟ, ಮತ್ತು ಭಾರವಾದ ಕಲ್ಲಿನ ಗುಂಡುಗಳನ್ನು ಹೆಗಲುಮೇಲೆವರೆಗೆ ಎತ್ತುವ ಸಾಹಸ. ಆದರೆ ಈಗ ಆಹಾರ ಪದ್ಧತಿ ಬದಲಾಗಿರುವುದರಿಂದ ಇಂತಹ ಕ್ರೀಡೆಗಳು ಕಡಿಮೆಯಾಗುತ್ತಿವೆ. ಕಾಬ್ಬರಿ, ಬೆಲ್ಲ, ಹಾಲು, ಕಾಳು ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದ ಹಿಂದಿನ ಕಾಲದ ಯುವಕರು ಭಾರ ಎತ್ತಲು ಹೆಚ್ಚು ತಯಾರಾಗಿದ್ದರು. ಈಗ ಅದು ಕಡಿಮೆ” ಎಂದರು.
ಆದರೂ ಕೌಳೂರು ಗ್ರಾಮ ಮಾತ್ರ ತನ್ನ ಕಲೆಗಳನ್ನು ಮರೆತಿಲ್ಲ. ಡಿಜಿಟಲ್ ಇಂಡಿಯಾಗೆ ಎಲ್ಲರೂ ಆಕರ್ಷಿತರಾಗುತ್ತಿರುವಾಗ, ವೀಡಿಯೋ ಗೇಮ್‌ಗಳು ಮಕ್ಕಳ ಮನಸ್ಸುಗಳಲ್ಲಿ ಪ್ರಾಬಲ್ಯ ಗಳಿಸುತ್ತಿರುವಾಗಲೂ, ಕೌಳೂರಿನ ಸಂಪ್ರದಾಯಿಕ ಕಲೆಗಳು ಜೀವಂತವಾಗಿವೆ. 17ರ ಹರೆಯದ ಬಸಲಿಂಗ 101 ಕೆಜಿ ಸಂಗ್ರಾಣಿ ಕಲ್ಲನ್ನು ಎತ್ತಿ ಗ್ರಾಮದ ಕೀರ್ತಿ ಹೆಚ್ಚಿಸಿದ ನಂತರ, ಗ್ರಾಮಸ್ಥರು ಪಟಾಕಿ ಸಿಡಿಸಿ, ಭರ್ಜರಿ ಮೆರವಣಿಗೆ ಮಾಡಿ ಯುವಕನ ಸಾಧನೆಗೆ ಸನ್ಮಾನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ರೆಡ್ಡಿ ಮಾಲಿ ಪಾಟೀಲ್ ಕೌಳೂರು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು, “ಬಸಲಿಂಗನ ಸಾಧನೆ ಹೆಚ್ಚಿನ ಯುವಕರಿಗೆ ಸ್ಪೂರ್ತಿಯಾಗಲಿ. ಹಳ್ಳಿಯ ಕಲೆಗಳು ಮಣ್ಣಿನ ವಾಸನೆ ಹೊತ್ತಿವೆ. ಇಂಥ ಕಲೆ ಉಳಿದರೆ ಹಳ್ಳಿಯ ಗೌರವ ಉಳಿದಂತೆ” ಎಂದು ಹರ್ಷ ವ್ಯಕ್ತಪಡಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮಾಳಪ್ಪ ಪೂಜಾರಿ ಕಾಡಪ್ಪನೋರು, ಶೇಖಪ್ಪ ಪೂಜಾರಿ, ಮಾದೇವಪ್ಪ ನಾಯ್ಕೋಡಿ, ಸಾಬರೆಡ್ಡಿ ಬಾವುರು, ಅಂಬಣ್ಣ ನಾಯ್ಕೋಡಿ, ನಿಂಗಪ್ಪ ಡೋಂಗೇರ್, ನಾಗಪ್ಪ ತೆಲುಗುರ, ಸಾಬಪ್ಪ ಬಂದಳ್ಳಿ, ನಾಗಪ್ಪ ನಾಲ್ವಡಿಗಿ, ದೇವಪ್ಪ ಮಸ್ಕಿ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

