ಯಾದಗಿರಿ, ಜುಲೈ 29: ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ರಾಜ್ಯದ ಆರ್ಥಿಕತೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಜೊತೆಗೆ ಹೆಚ್ಚಿನ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ನಗರದ ಎಸ್.ಡಿ.ಎನ್ ರೆಸಿಡೆನ್ಸಿಯಲ್ಲಿ ನಡೆದ ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ವೇಗಗೊಳಿಸುವುದು ಯೋಜನೆಯಡಿಯಲ್ಲಿ ಲೀನ್ ಯೋಜನೆ, ಝಡ್ ಇಡಿ ಮತ್ತು ರಫ್ತು ವಿಷಯಕ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ರಾಜ್ಯ ಸರ್ಕಾರ ಸಣ್ಣ ಉದ್ದಿಮೆದಾರರನ್ನು ತೊಂದರೆಮುಕ್ತಗೊಳಿಸಲು ವಿಶೇಷ ಪ್ರಯತ್ನವನ್ನತ್ತಿದೆ. ಇದನ್ನು ಉತ್ತೇಜಿಸಲು ಬೆಂಗಳೂರು ಕಾಶಿಯಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕ ಎಂ.ಎಸ್.ಎಂ.ಇ ಸಚಿವಾಲಯ ಸ್ಥಾಪನೆ ನಿರ್ಧಾರ ಮಾಡಲಾಗಿದೆ” ಎಂದು ಅವರು ತಿಳಿಸಿದರು.
ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಕಾಶಿಯಾ ಸೇರಿದಂತೆ ವಿವಿಧ ಕೈಗಾರಿಕಾ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ರಫ್ತು ತರಬೇತಿ ಕೂಡಾ ನೀಡಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ದಿನೇಶ್ ಕುಮಾರ್ ಜೈನ್, ರೈಸ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಹನುಮದಾಸ್ ಮುಂದಡಾ, ಸುರಪುರ ಕೈಗಾರಿಕೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಜೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸತೀಶ್ ಕುಮಾರ್, ವಿಟಿಪಿಸಿ ಸಹಾಯಕ ನಿರ್ದೇಶಕ ಜಾಫರ್ ಅನ್ಸಾರಿ, ಡಿಜೆಎಂ ಕುಲಶೇಖರನ್ ಉಪಸ್ಥಿತರಿದ್ದರು.
ಸಣ್ಣ ಕೈಗಾರಿಕೆ ಅಭಿವೃದ್ಧಿಯತ್ತ ಜಿಲ್ಲೆಯಲ್ಲಿ ಹೊಸ ಚಲನ ನೀಡಿದ ಕಾರ್ಯಕ್ರಮ ಎಂದು ಹಾಜರಿದ್ದ ಉದ್ಯಮಿಗಳು ಪ್ರಶಂಸಿಸಿದರು.

