Mon. Dec 1st, 2025

ಜಿಲ್ಲೆಯ ವಸತಿ ನಿಲಯ ಮತ್ತು ಆಸ್ಪತ್ರೆಗೆ ಶಶಿಧರ ಕೋಸಂಬೆ ಭೇಟಿ: ಅಸೌಕರ್ಯ ಕಂಡು ಅಧಿಕಾರಿಗಳಿಗೆ ಸೂಚನೆ

ಜಿಲ್ಲೆಯ ವಸತಿ ನಿಲಯ ಮತ್ತು ಆಸ್ಪತ್ರೆಗೆ ಶಶಿಧರ ಕೋಸಂಬೆ ಭೇಟಿ: ಅಸೌಕರ್ಯ ಕಂಡು ಅಧಿಕಾರಿಗಳಿಗೆ ಸೂಚನೆ

ಅಸೌಕರ್ಯ ಕಂಡು ಅಧಿಕಾರಿಗಳಿಗೆ ಕ್ಲಾಸ್, ತ್ವರಿತ ಪರಿಹಾರದ ಸೂಚನೆ

ಯಾದಗಿರಿ, ಜುಲೈ 29: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಶನಿವಾರ ಯಾದಗಿರಿ ನಗರದಲ್ಲಿನ ಹಲವು ವಸತಿ ನಿಲಯಗಳು ಹಾಗೂ ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಸಮಸ್ಯೆಗಳ ಪರಿಶೀಲನೆ ನಡೆಸಿದರು. ಅವರು ಮಕ್ಕಳ ಹಕ್ಕುಗಳ ಉಲ್ಲಂಘನೆ ಇಲ್ಲದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇಂದಿರಾ ಗಾಂಧಿ ನರ್ಸಿಂಗ್ ಬಾಲಕಿಯರ ಹಾಸ್ಟೆಲ್‌ ಪರಿಶೀಲನೆ
ಹೊಸಳ್ಳಿ ಕ್ರಾಸ್ ಬಳಿ ಇರುವ ಇಂದಿರಾ ಗಾಂಧಿ ನರ್ಸಿಂಗ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿನಿಯರಿಂದ ನೇರವಾಗಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಶುದ್ಧ ಕುಡಿಯುವ ನೀರಿನ ಘಟಕ ನಿಷ್ಕ್ರಿಯವಾಗಿದೆ, ಶೌಚಾಲಯಗಳ ಸ್ಥಿತಿ ಹದಗೆಟ್ಟಿದೆ ಮತ್ತು ಆಹಾರದ ಗುಣಮಟ್ಟ ತೀರಾ ತೃಪ್ತಿಕರವಿಲ್ಲ ಎಂಬ ವಿಷಯಗಳು ಅವರ ಗಮನಕ್ಕೆ ಬಂದವು. ಅಡುಗೆ ಕೋಣೆಯ ಪರಿಶೀಲನೆಯ ವೇಳೆ ಆಹಾರ ಸಾಮಗ್ರಿಗಳ ಕೊರತೆಯಿದೆ ಎಂಬುದನ್ನು ಕಂಡು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶೌಚಾಲಯದ ಅಜಾಗರೂಕತೆಯ ಬಗ್ಗೆ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದರು.

ಕ್ರೀಡಾ ವಸತಿ ನಿಲಯದ ಸ್ಥಿತಿಗತಿ
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರಿಸಬೇಕಾದ ಸ್ಥಳವಾಗಿರುವ ಜಿಲ್ಲಾ ಕ್ರೀಡಾಂಗಣದ ಪರಿಸರ ಕೂಡ ನಿರ್ಲಕ್ಷ್ಯದ ಹೊಡೆಯಿಂದ ತಪ್ಪಿಸಿಲ್ಲ. ಒಡೆದ ಗಾಜಿನ ಪುಡಿಗಳು ಹಾಗೂ ಬಿದ್ದಿರುವ ಮೊಳೆಗಳನ್ನು ಕಂಡ ಶಶಿಧರ ಕೋಸಂಬೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಸ್ವಚ್ಛತಾ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. “ನೀವು ಇತರ ಜಿಲ್ಲೆಗಳ ಮಾದರಿಯಾಗಬೇಕು” ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಪರಿಶೀಲನೆ
ನಂತರ ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ವಾರ್ಡ್, ಅಪೌಷ್ಟಿಕತೆ ನಿವಾರಣಾ ಘಟಕ, ಡ್ರೈನೆಜ್ ವ್ಯವಸ್ಥೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಅವಶ್ಯಕತೆಗಳ ಬಗ್ಗೆ ಸಮೀಕ್ಷೆ ನಡೆಸಿದರು. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಿರುವ ಕಾರಣವನ್ನು ಪ್ರಶ್ನಿಸಿ, ಪೌಷ್ಟಿಕ ಆಹಾರದ ಪೂರೈಕೆ, ಶೌಚಾಲಯ ಸ್ವಚ್ಛತೆ ಮತ್ತು ಡ್ರೈನೆಜ್ ನೀರಿನ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿದ್ದವರು
ಈ ಪರಿಶೀಲನಾ ಭೇಟಿ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ, ಬಿಸಿಎಂ ಇಲಾಖೆ ಡಿಡಿ ಸದಾಶಿವ ನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಡಿಡಿ ಚನ್ನಬಸಪ್ಪ, ಡಾ. ಮಹೇಶ್ ಬಿರಾದಾರ (ಡಿಎಚ್‌ಓ), ಡಾ. ರಿಜ್ವಾನಾ, ಡಾ. ಕುಮಾರ್ ಅಂಗಡಿ ಸೇರಿದಂತೆ ಹಲವಾರು ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

 

Related Post

Leave a Reply

Your email address will not be published. Required fields are marked *

error: Content is protected !!