ಏ ೨೫:-
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಿಡಿಲಿನ ಪ್ರಮಾಣ ಹೆಚ್ಚು
ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲೇ ಇಂತಹ ವಿದ್ಯುತ್ ಅಬ್ಬರ ಹೆಚ್ಚಾಗಿದ್ದು, 2020 ರಿಂದ 2023ರ ಅವಧಿಯಲ್ಲಿ ರಾಜ್ಯದಾದ್ಯಾಂತ 9.8 ಲಕ್ಷಕ್ಕೂ ಹೆಚ್ಚು ಸಿಡಿಲು ಸಂಭವಿಸಿರುವುದಾಗಿ ವರದಿಯಾಗಿದೆ. ಈ ಪೈಕಿ ಮೇ ತಿಂಗಳಲ್ಲಿ ಮಾತ್ರ 3.63 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಏಪ್ರಿಲ್‌ನಲ್ಲಿ 2.52 ಲಕ್ಷ ಹಾಗೂ ಅಕ್ಟೋಬರ್‌ನಲ್ಲಿ 97 ಸಾವಿರ, ಜೂನ್‌ನಲ್ಲಿ 91 ಸಾವಿರ ಪ್ರಕರಣಗಳು ದಾಖಲಾಗಿವೆ. ಇದರ ಅರ್ಥ, ಮುಂದಿನ ಮೇ ತಿಂಗಳು ರಾಜ್ಯದ ಜನರಿಗಾಗಿ ಸಿಡಿಲಿನ ಆರ್ಭಟದ ಜೊತೆ ಬರುತ್ತದೆ.
ಮೂಲ ಕಾರಣವೇನು?
ಉತ್ತರ ಕರ್ನಾಟಕದಲ್ಲಿ ತಾಪಮಾನ ಹೆಚ್ಚಿರುವುದರಿಂದ ಕೂಡಲೇ ‘ಕ್ಲೌಡ್ ಪಾರ್ಮೇಷನ್’ ಆಗುತ್ತದೆ. ಇದನ್ನು ತಜ್ಞರು ‘ಕನ್ವೆಕ್ಟಿವ್ ಕ್ಲೌಡ್ಸ್’ ಎಂದು ಗುರುತಿಸಿದ್ದು, ಈ ಸಂವಹನ ಮೋಡಗಳಿಂದಲೇ ಗುಡುಗು ಮತ್ತು ಮಿಂಚು ಉಂಟಾಗುತ್ತದೆ. ನೆಲದಿಂದ ಆಕಾಶದವರೆಗೆ ಶಾಖದ ಚಲನೆಯು ಮೋಡಗಳ ರಚನೆಗೆ ಕಾರಣವಾಗುತ್ತದೆ. ಇದರಿಂದಲೇ ಆಲಿಕಲ್ಲು ಮಳೆ, ಮಿಂಚು ಮತ್ತು ಸಿಡಿಲು ಸಂಭವಿಸುತ್ತವೆ.
ಮರದಡಿ ಆಶ್ರಯಕ್ಕೆ ಹೋಗೋದು ಅಪಾಯ!
ಸಿಡಿಲಿಗೆ ಹೆದರಿದವರು ಬಯಲು ಪ್ರದೇಶದಲ್ಲಿ ಒಂಟಿ ಮರದಡಿ ಆಶ್ರಯ ಪಡೆಯುವುದು ಸಾಮಾನ್ಯ. ಆದರೆ ಇದು ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಿಡಿಲುಗಳು ಹೆಚ್ಚಿನ ಪ್ರಮಾಣದಲ್ಲಿ ಮರಗಳನ್ನೇ ಆಕರ್ಷಿಸುತ್ತವೆ. ಹೀಗಾಗಿ ಮರದಡಿಯಲ್ಲಿ ನಿಲ್ಲುವುದು ಜೀವಕ್ಕೆ ಭೀತಿ. ರಾಜ್ಯದಲ್ಲಿ 2011ರಿಂದ 2023ರವರೆಗೆ 947 ಮಂದಿ ಸಿಡಿಲಿಗೆ ಬಲಿಯಾಗಿದ್ದು, ಅವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದವರು.
ಅತಿದೊಡ್ಡ ಅಪಾಯದ ಪ್ರದೇಶಗಳು
ಕಲಬುರಗಿ, ಬೆಳಗಾವಿ, ವಿಜಯಪುರ, ಬೀದರ್, ಕೊಪ್ಪಳ, ಹಾವೇರಿ, ಯಾದಗಿರಿ, ಗದಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳು ಸಿಡಿಲು ಪ್ರಮಾಣದಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿವೆ. ಭೂಮಿ ಮತ್ತು ಮೋಡದ ನಡುವೆ ಬರುವ ಸಿಡಿಲು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸೂಚನೆ: ಎಚ್ಚರಿಕೆಯಿಂದಿರಿ!
ಮುಂದಿನ ಮೇ ತಿಂಗಳಲ್ಲಿ ಹೆಚ್ಚು ಮಳೆ ಮತ್ತು ಸಿಡಿಲು ಸಂಭವಿಸುವ ನಿರೀಕ್ಷೆ ಇದೆ. ಬಯಲಿನಲ್ಲಿ ಇರುವವರು, ಹತ್ತಿರದ ಸುರಕ್ಷಿತ ಸ್ಥಳಕ್ಕೆ ತೆರಳಿ, ಮರದಡಿಯಲ್ಲಿ ನಿಲ್ಲದೇ, ಮೊಬೈಲ್ ಬಳಕೆ ತಪ್ಪಿಸಿ, ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಜೋರಾಗಿ ಸಲಹೆ ನೀಡಿದೆ.