Mon. Jul 21st, 2025

ಯಾದಗಿರಿಗೆ ಭೀಮಾ ನದಿಯಿಂದ ಶುದ್ಧ ಕುಡಿಯುವ ನೀರು: ₹53.16 ಕೋಟಿಯ ಅಮೃತ 2.0 ಯೋಜನೆಗೆ ಶಂಕುಸ್ಥಾಪನೆ

ಯಾದಗಿರಿಗೆ ಭೀಮಾ ನದಿಯಿಂದ ಶುದ್ಧ ಕುಡಿಯುವ ನೀರು: ₹53.16 ಕೋಟಿಯ ಅಮೃತ 2.0 ಯೋಜನೆಗೆ ಶಂಕುಸ್ಥಾಪನೆ

ಯಾದಗಿರಿ, ಏ೦೭:-

ಯಾದಗಿರಿ ಜಿಲ್ಲೆಯ ಜನತೆ ಎದುರಿಸುತ್ತಿದ್ದ ಬಹುಮಾನ್ಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, ಸರ್ಕಾರ ಮಹತ್ವಾಕಾಂಕ್ಷೆಯ ಅಮೃತ 2.0 ಯೋಜನೆಯ ಅಡಿಯಲ್ಲಿ ಭೀಮಾ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದೆ. ನಗರದ ಕಮಲನೆಹರು ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ್ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯಾದಗಿರಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆ ಹಲವಾರು ವರ್ಷಗಳಿಂದ ಬೇಡಿಕೆಯಾಗಿ ಉಳಿದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು 53.16 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭೀಮಾ ನದಿ ಮೂಲದಿಂದ ಶುದ್ಧ ನೀರು ಪೂರೈಕೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಇದರಿಂದ 31 ವಾರ್ಡ್ಗಳ ವ್ಯಾಪ್ತಿಗೆ ನಿರಂತರವಾಗಿ ನೀರು ಲಭ್ಯವಾಗಲಿದೆ” ಎಂದು ಹೇಳಿದರು.

ಆರು ವಲಯಗಳ ಮೂಲಕ ಸಮಗ್ರ ಯೋಜನೆ
ಯಾದಗಿರಿ ನಗರವನ್ನು ಆರು ವಲಯಗಳಾಗಿ ವಿಭಜಿಸಲಾಗಿದ್ದು, ಪ್ರತಿಯೊಂದು ವಲಯಕ್ಕೂ ನೂತನ ಪೈಪ್ಲೈನ್ ಅಳವಡಿಸಲಾಗುತ್ತಿದೆ. ನೀರಿನ ಒತ್ತಡ ಮತ್ತು ವಿತರಣೆಯ ಆಧಾರದ ಮೇಲೆ ಪ್ಲ್ಯಾನ್ ರೂಪಿಸಿ, ಈಗಾಗಲೇ ಭೀಮಾ ನದಿಯ ಬಳಿ ಶುದ್ಧೀಕರಣ ಘಟಕದ ಕಾಮಗಾರಿ ಅಂತಿಮ ಹಂತದಲ್ಲಿದೆ.

ಇದೇ ಹಿನ್ನಲೆಯಲ್ಲಿ 7.50 ಲಕ್ಷ ಲೀಟರ್ ಸಾಮರ್ಥ್ಯದ, 15 ಮೀಟರ್ ಎತ್ತರದ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಜಲಸಂಗ್ರಹಗಾರದಿಂದ ನಗರ ವ್ಯಾಪ್ತಿಯಲ್ಲಿ ಸಮರ್ಪಕ ವಿತರಣಾ ವ್ಯವಸ್ಥೆ ರೂಪಿಸಲಾಗುವುದು.

ಶಹಾಪುರ, ಸುರಪುರ ಯೋಜನೆಗಳ ಪ್ರಗತಿ
ಸುರಪುರದ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಶಹಾಪುರದಲ್ಲಿ ನೂತನ ಪೈಪ್ಲೈನ್ ಅಳವಡಿಕೆ ಕಾರ್ಯಕ್ಕೂ ಸರ್ಕಾರದಿಂದ ಅನುಮೋದನೆ ದೊರೆತಿದೆ. ಕಾಮಗಾರಿ ಪ್ರಸ್ತುತ ತ್ವರಿತಗತಿಯಲ್ಲಿ ನಡೆಯುತ್ತಿದೆ.

ವಲಯವಾರು ಕಾಮಗಾರಿ ಪ್ರಗತಿ
ವಲಯ 1: ಕೋಲಿವಾಡದಲ್ಲಿ ನೆಲಮಟ್ಟದ ಜಲಸಂಗ್ರಹಗಾರದಿಂದ ವಿತರಣಾ ಕೊಳವೆ ಮಾರ್ಗ ಅಳವಡಿಕೆ ನಡೆಯುತ್ತಿದೆ.
ವಲಯ 2: ಜಲಶುದ್ಧಿಕರಣ ಘಟಕದಲ್ಲಿ ಇರುವ ಮೇಲ್ಮಟ್ಟದ ಟ್ಯಾಂಕ್‌ನಿಂದ ವಿತರಣಾ ಪೈಪ್ಲೈನ್ ಅಳವಡಿಕೆ ಆರಂಭವಾಗಿದೆ. ಇವುಗಳ ಸಂಪೂರ್ಣತೆಯೊಂದಿಗೆ ನಗರ ಜನತೆಗೆ ನಿರಂತರ ನೀರು ಲಭ್ಯವಾಗಲಿದೆ.

ರಾಜ್ಯ ಸರ್ಕಾರದ ವಿಕಾಸ ಭರಾಟೆ
ಸಚಿವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ರಾಜ್ಯ ಸರ್ಕಾರದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ವಿವರಿಸಿದರು. “ಗ್ಯಾರಂಟಿ ಯೋಜನೆಗಳ ಜತೆಗೆ 5000 ಕೋಟಿ ರೂ.ಗಳ ಅನುದಾನವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಒದಗಿಸಲಾಗಿದೆ. ಶಾಸಕರ ಅನುದಾನದಡಿ 120 ಕೋಟಿ ರೂ., ಸಿಟಿ ಸ್ಕ್ಯಾನ್ ಯಂತ್ರಕ್ಕಾಗಿ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದರು.

ವಿದ್ಯಾರ್ಥಿ ನಿಲಯ, ಶಾಲಾ ಅಭಿವೃದ್ಧಿಗೆ ಹೆಚ್ಚಿನ ಅನುದಾನ
ಮೊರಾರ್ಜಿ ದೇಸಾಯಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಸತಿ ಶಾಲೆಗಳಿಗೆ ತಲಾ 20 ರಿಂದ 30 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ ಉನ್ನತೀಕರಣಕ್ಕಾಗಿ 900 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇತ್ತೀಚೆಗೆ “ಕಲ್ಯಾಣ ಪಥ” ಯೋಜನೆಯಡಿ ಪ್ರತಿಕ್ಷೇತ್ರಕ್ಕೂ 35 ಕೋಟಿ ರೂ.ಗಳನ್ನು ಹಂಚಲಾಗಿದೆ.

ಶೇಖಡ 25ರಷ್ಟು ಅನುದಾನ ‘ಅಕ್ಷರ ಅವಿಷ್ಕಾರ’ ಯೋಜನೆಗೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ‘ಅಕ್ಷರ ಅವಿಷ್ಕಾರ’ ಯೋಜನೆಗಾಗಿ ಶೇಕಡ 25ರಷ್ಟು ಅನುದಾನವನ್ನು ಈ ಭಾಗಕ್ಕೆ ಮೀಸಲಾಗಿಸಲಾಗಿದೆ ಎಂದು ಸಚಿವರು ವಿವರಿಸಿದರು.ಯಾದಗಿರಿ, ಶಹಾಪುರ್, ಸುರಪುರ ಭಾಗಗಳ ಜನತೆ ಬಹುಕಾಲದಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆಗಳು ರೂಪುಗೊಂಡಿದ್ದು, ಪ್ರಗತಿ ಕ್ರಮಗಳಲ್ಲಿ ತ್ವರಿತ ಅನುಷ್ಠಾನವು ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!