ಯಾದಗಿರಿ ಏ ೦೨:- ಕರ್ನಾಟಕದ ಉತ್ತರ ಭಾಗದ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಮಹಾರಾಷ್ಟ್ರ ಸರ್ಕಾರದಿಂದ ನೀರು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ. ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುವಂತೆ ಈ ಪತ್ರದಲ್ಲಿ ವಿನಂತಿಸಲಾಗಿದೆ.
ಗಂಭೀರವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ
ಈ ವರ್ಷದ ಬೇಸಿಗೆ ಆರಂಭದಿಂದಲೇ ಉತ್ತರ ಕರ್ನಾಟಕದ ಜಿಲ್ಲೆಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಜನರು ಕುಡಿಯುವ ನೀರಿಗಾಗಿ ಸಂಕಷ್ಟದಲ್ಲಿದ್ದಾರೆ. ಹಿಪ್ಪರಗಿ ಬ್ಯಾರೇಜ್ ಮತ್ತು ಇತರ ಸ್ಥಳೀಯ ಜಲಾಶಯಗಳಲ್ಲಿ ಇರುವ ನೀರು ಮುಂಗಾರು ಆರಂಭವಾಗುವವರೆಗೆ ಪೂರಕವಾಗದು ಎಂಬ ಆತಂಕ ವ್ಯಕ್ತವಾಗಿದೆ.
ಹಿಂದಿನ ವರ್ಷಗಳಲ್ಲಿಯೂ ಕರ್ನಾಟಕವು ಕುಡಿಯುವ ನೀರಿಗಾಗಿ ಮಹಾರಾಷ್ಟ್ರ ಸರ್ಕಾರದ ನೆರವನ್ನು ಕೇಳಿದ್ದು, ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿತ್ತು. ಈ ಹಿನ್ನಲೆಯಲ್ಲಿ, ಮತ್ತೆ ಸಹಾಯವನ್ನು ನಿರೀಕ್ಷಿಸುತ್ತಿರುವ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದೆ.
2 ಟಿಎಂಸಿ ಕೃಷ್ಣಾ ನದಿಗೆ, 1 ಟಿಎಂಸಿ ಭೀಮಾ ನದಿಗೆ ನೀರು ಬಿಡಲು ಮನವಿ
ಈ ಬಾರಿ ಪರಿಸ್ಥಿತಿ ಗಂಭೀರವಾಗಿರುವ ಕಾರಣ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕನಿಷ್ಠ 2.00 ಟಿಎಂಸಿ ಮತ್ತು ಉಜ್ಜಯನಿ ಜಲಾಶಯದಿಂದ ಭೀಮಾ ನದಿಗೆ 1.00 ಟಿಎಂಸಿ ನೀರು ಬಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.
https://x.com/siddaramaiah/status/1907044286606270799
ಬೇಸಿಗೆಯಲ್ಲಿ ನೀರಿನ ನಿರ್ವಹಣೆ ಅತ್ಯಗತ್ಯ
ಕರ್ನಾಟಕದ ಈ ಜಿಲ್ಲೆಗಳ ಜನರು ನೀರಿನ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವುದರಿಂದ, ಬೇಸಿಗೆಯಲ್ಲಿ ನೀರಿನ ಸರಬರಾಜನ್ನು ಸುಗಮಗೊಳಿಸಲು ಸರ್ಕಾರಗಳು ಸಹಕಾರ ನೀಡಬೇಕಿದೆ. ಮುಂಗಾರು ಆರಂಭವಾಗುವವರೆಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಒತ್ತಾಯಿಸಿದೆ.