Tue. Jul 22nd, 2025

ಮೀರತ್‌: ಪ್ರಿಯಕರನ ಜೊತೆ ಸೇರಿ ಪತಿಯನ್ನೇ 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಸೀಲ್ ಮಾಡಿದ ಪತ್ನಿ!

ಮೀರತ್‌: ಪ್ರಿಯಕರನ ಜೊತೆ ಸೇರಿ ಪತಿಯನ್ನೇ 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಸೀಲ್ ಮಾಡಿದ ಪತ್ನಿ!

ಮೀರತ್, ಮಾರ್ಚ್ 19:-

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ಭೀಕರ ಕೊಲೆ ಪ್ರಕರಣವು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಲಂಡನ್‌ನಿಂದ ತನ್ನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಐದು ವರ್ಷದ ಮಗಳು ಪಿಹು ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ಸೌರಭ್ ಕುಮಾರ್ ಎಂಬಾತನನ್ನು ಅವನ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ನಿಖರ ಯೋಜನೆ ಮಾಡಿಕೊಂಡು ಹತ್ಯೆ ಮಾಡಿದ್ದಾರೆ. ಕೊಲೆಯ ನಂತರ ಸೌರಭ್‌ನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಿಮೆಂಟ್ ತುಂಬಿ ಸೀಲ್ ಮಾಡಲಾಗಿದೆ.

ಪ್ರೇಮ ವಿವಾಹದಿಂದ ಕೊಲೆಗೂ..

ಸೌರಭ್ ಕುಮಾರ್ ಮತ್ತು ಮುಸ್ಕಾನ್ 2016ರಲ್ಲಿ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಮೀರತ್‌ನ ಪಕ್ಕದ ಮನೆಯ ಮುಸ್ಕಾನ್‌ಳನ್ನು ಪ್ರೀತಿಸಿ ಮದುವೆಯಾಗಿದ್ದ ಸೌರಭ್, ಮದುವೆಯ ನಂತರ ಮರ್ಚೆಂಟ್ ನೇವಿಯಲ್ಲಿ ಕೆಲಸ ಪಡೆಯುತ್ತಾನೆ. ಒಂದು ವರ್ಷದ ಬಳಿಕ ಆ ಕೆಲಸವನ್ನು ತೊರೆದ ಸೌರಭ್, ಮೂರು ವರ್ಷಗಳ ಕಾಲ ಮೀರತ್‌ನ ದೆಹಲಿ ರಸ್ತೆಯ ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡಿದ್ದನು. ನಂತರ ಲಂಡನ್‌ಗೆ ತೆರಳಿ ಅಲ್ಲಿನ ಮಾಲ್‌ನಲ್ಲಿ ಮಾರಾಟ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ.

ಮೀರತ್‌ನ ಇಂದಿರಾನಗರದಲ್ಲಿ ಕಳೆದ ಮೂರು ವರ್ಷಗಳಿಂದ ಒಂಪಾಲ್ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಕುಟುಂಬದ ಜೀವನ ಶಾಂತಿಯಿಂದ ಸಾಗುತ್ತಿತ್ತು. ಆದರೆ, ಮುಸ್ಕಾನ್ನು ಸಾಹಿಲ್ ಶುಕ್ಲಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಇದೇ ಸಂಬಂಧ ಸೌರಭ್ನ ಕೊಲೆಗೆ ದಾರಿ ಮಾಡಿಕೊಟ್ಟಿತು.

ಪ್ರೀಪ್ಲಾನ್ ಮಾಡಿದ ಭೀಕರ ಕೊಲೆ

ಮಾರ್ಚ್ 4 ರಂದು, ಸೌರಭ್ಗೆ ಮಾದಕ ದ್ರವ್ಯ ನೀಡಿದ ಬಳಿಕ ಮುಸ್ಕಾನ್ ಮತ್ತು ಸಾಹಿಲ್ ಸೇರಿ ಆತನ ಎದೆಗೆ ಚಾಕುವಿನಿಂದ ಇರಿದು, ಗಂಟಲು ಸೀಳಿ ಭೀಕರವಾಗಿ ಕೊಲೆ ಮಾಡುತ್ತಾರೆ. ಕೊಲೆಗೆ ಮುನ್ನ ಚಾಕುಗಳು, ಬ್ಲೇಡ್‌ಗಳು ಮತ್ತು ದೊಡ್ಡ ಪಾಲಿಥಿನ್ ಚೀಲಗಳನ್ನು ಖರೀದಿಸಿ ನಿಖರ ಯೋಜನೆ ಸಿದ್ಧಪಡಿಸಲಾಗಿತ್ತು. ಕೊಲೆಯಾದ ಬಳಿಕ ಶವವನ್ನು ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ, ದೇಹವನ್ನು 15 ತುಂಡುಗಳಾಗಿ ಕತ್ತರಿಸಲಾಗಿತ್ತು. ಈ ವೇಳೆ ಸ್ನಾನಗೃಹದಿಂದ ರಕ್ತ ಚರಂಡಿಗೆ ಹರಿದು ಭಯಾನಕ ದೃಶ್ಯ ಸೃಷ್ಟಿಸಿತ್ತು.

ದೇಹವನ್ನು ಡ್ರಮ್‌ನಲ್ಲಿ ಮುಚ್ಚಿಟ್ಟ ಹಂತಕರು

ಮಾರ್ಚ್ 5 ರಂದು ಸಾಹಿಲ್ ಒಂದು ದೊಡ್ಡ ಪ್ಲಾಸ್ಟಿಕ್ ಡ್ರಮ್, ಸಿಮೆಂಟ್ ಮತ್ತು ಮಣ್ಣು ತಂದಿದ್ದ. ದೇಹದ ತುಂಡುಗಳನ್ನು ಡ್ರಮ್‌ನಲ್ಲಿ ತುಂಬಿಸಿ, ನೀರು ಸುರಿದು ಸಿಮೆಂಟ್ ಮತ್ತು ಧೂಳು ಬೆರೆಸಿ ಸೀಲ್ ಮಾಡಲಾಗಿದೆ. ಡ್ರಮ್‌ನಲ್ಲಿ ಕೊಲೆ ಮಾಡಿದ ಚಾಕು ಮತ್ತು ಬ್ಲೇಡ್‌ಗಳನ್ನೂ ಇಡಲಾಗಿತ್ತು.

ಶಿಮ್ಲಾಕ್ಕೆ ಪರಾರಿಯಾದ ಮುಸ್ಕಾನ್ ಮತ್ತು ಸಾಹಿಲ್

ಕೊಲೆಯ ನಂತರ ಮುಸ್ಕಾನ್ ತನ್ನ ಮಗಳನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು, ಸಾಹಿಲ್ ಜೊತೆ ಶಿಮ್ಲಾಗೆ ಪರಾರಿಯಾಗಿದ್ದಳು. ಶಿಮ್ಲಾದಿಂದ ಮರಳಿದ ಬಳಿಕ ಮುಸ್ಕಾನ್ ತನ್ನ ತಂದೆಗೆ ಸೌರಭ್ನ ಕೊಲೆಯ ಬಗ್ಗೆ ತಿಳಿಸಿದ್ದಾಳೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿ, ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾರನ್ನು ಬಂಧಿಸಿದ್ದಾರೆ.

ಅಪರಾಧ ಒಪ್ಪಿಕೊಂಡ ಹಂತಕರು

ಪೊಲೀಸರ ವಿಚಾರಣೆಯಲ್ಲಿ ಮುಸ್ಕಾನ್ ಮತ್ತು ಸಾಹಿಲ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಸೌರಭ್ನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿಯುತ್ತಿದೆ. ಮೀರತ್‌ನಲ್ಲಿ ಈ ಭೀಕರ ಘಟನೆಯು ಭಾರೀ ಆಘಾತವನ್ನುಂಟು ಮಾಡಿದ್ದು, ಸ್ಥಳೀಯರು ಮುಸ್ಕಾನ್ ಮತ್ತು ಸಾಹಿಲ್ನ ಭೀಕರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!