ಯಾದಗಿರಿ, ಮಾರ್ಚ್ 04:– ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಯಾದಗಿರಿ ಮತಕ್ಷೇತ್ರದ ಮುದ್ನಾಳ ಗ್ರಾಮಪಂಚಾಯತಿ ವ್ಯಾಪ್ತಿಯ ಮುದ್ನಾಳ ದೊಡ್ಡ ತಾಂಡಾ (ಭೀಮನಗರ) ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು, ಖಾಲಿ ಕೊಡ ಹಿಡಿದು ಭಾರಿ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಎಂಟು ವರ್ಷಗಳ ಕಾಯುವಿಕೆ, ಇನ್ನೂ ಉದ್ಘಾಟನೆಯಾಗದ ನೀರಿನ ಘಟಕ
ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ನೀರಿನ ಮೇಲ್ತೊಟ್ಟಿ ಹಾಗೂ ಆರೋ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿತ್ತು. ಆದರೆ, ಕಳೆದ ಆರು ವರ್ಷಗಳಿಂದ ಈ ಘಟಕ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಇದಕ್ಕೆ ಕಾರಣವೇನು? ಹಣೆಬರಹವಾಗಿರುವ ಈ ಯೋಜನೆಗೆ ಸರ್ಕಾರ ಹಾಗೂ ಆಡಳಿತ ಯಂತ್ರ ತೊಡಕು ಒಡ್ಡುತ್ತಿದೆಯೇ? ಎಂಬ ಪ್ರಶ್ನೆಯನ್ನು ಉಮೇಶ್ ಮುದ್ನಾಳ ಅಧಿಕಾರಿಗಳಿಗೆ ನೇರವಾಗಿ ಕೇಳಿದರು.
ನೀರು, ರಸ್ತೆ, ಚರಂಡಿ ಸಮಸ್ಯೆ: ಜನರ ಆರೋಗ್ಯ ಅಪಾಯದಲ್ಲಿ
ಪ್ರತಿಭಟನಾಕಾರರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾ,
“ಗ್ರಾಮದಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಕೊಳಕು ನೀರಿನಿಂದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ತಾಂಡಾದಲ್ಲಿ ಖಾಲಿ ನಿವೇಶನಗಳು ಕಸದ ಗುಡ್ಡೆಗಳಾಗಿದ್ದು, ಚರಂಡಿ ವ್ಯವಸ್ಥೆ ಇಲ್ಲದ ಕಾರಣ ತಗ್ಗು ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಸ್ಥಳವಾಗಿ ಮಾರ್ಪಟ್ಟಿದೆ. ವಿದ್ಯುತ್ ಕಂಬಗಳು ಬಾಗಿದ್ದು, ತಂತಿಗಳು ಕೆಳಗೆ ಬಿದ್ದಿವೆ. ಇದರಿಂದ ಯಾವುದೇ ಸಮಯದಲ್ಲಿ ಅನಾಹುತ ಸಂಭವಿಸಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಶ್ವಾಸನೆ ಬೇಕೇ, ಸಮಸ್ಯೆಗೆ ಪರಿಹಾರ ಬೇಕಾ?
“ತಾಂಡಾದ ಅಭಿವೃದ್ಧಿಗೆ ಅನೇಕ ಭರವಸೆಗಳನ್ನು ಶಾಸಕರು ಮತ್ತು ಅಧಿಕಾರಿಗಳು ನೀಡಿದರೂ, ಸಮಸ್ಯೆಗೆ ಯಾವುದೇ ಪರಿಹಾರ ದೊರೆತಿಲ್ಲ. ಕಲುಷಿತ ನೀರಿನಿಂದ ಸಾಕಷ್ಟು ಸಾವು-ನೋವು ಪ್ರಕರಣಗಳು ಈ ಹಿಂದೆ ವರದಿಯಾಗಿವೆ. ಆದರೆ, ಆಡಳಿತ ಇನ್ನೂ ಕಿವಿಪತ್ತಿಸಿಕೊಳ್ಳುತ್ತಿಲ್ಲ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಪ್ರಶ್ನೆಗಳಿಗೆ ಉತ್ತರ ಬೇಕು, ಇಲ್ಲದಿದ್ದರೆ ದೊಡ್ಡ ಪ್ರತಿಭಟನೆ
ಉಮೇಶ್ ಮುದ್ನಾಳ ಅವರು,
“ನೀರಿನ ಮೇಲ್ತೊಟ್ಟಿ ಮತ್ತು ಶುದ್ಧ ನೀರಿನ ಘಟಕವನ್ನು ಶೀಘ್ರದಲ್ಲಿ ಆರಂಭಿಸಬೇಕು. ಇದಕ್ಕಾಗಿ ಆರ್ಥಿಕ ವೆಚ್ಚ ಎಷ್ಟು? ಕಾಮಗಾರಿ ಪೂರ್ಣಗೊಂಡೋ ಅಥವಾ ಮಂಜೂರಾದ ಅನುದಾನ ಬಳಸಲಾಗಿದೆಯೋ ಎಂಬ ಬಗ್ಗೆ ತನಿಖೆ ನಡೆಸಬೇಕು. ಇಲ್ಲವಾದರೆ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಯಾದಗಿರಿ-ಕಲಬುರಗಿ ಮುಖ್ಯ ಜಿಲ್ಲಾ ಆಸ್ಪತ್ರೆ ಸರ್ಕಲಿನಲ್ಲಿ ರಸ್ತೆ ಬಂದ್ ಮಾಡಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾದ ಪ್ರಮುಖರು
ಈ ವೇಳೆ ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮೋಹನ್, ಕೇವಲಾ, ಭೀಮು, ಶಂಕರ, ಬಾಬು, ಮಾರುತಿ, ರೂಪ್ಲಾ, ಹೀರಾಸಿಂಗ, ಸಂತೋಷ, ವಿಠ್ಠಲ್, ರಾಜು, ಪೂನಿಬಾಯಿ, ಗಂಲಿಬಾಯಿ, ಚನ್ನಮ್ಮ, ಮೋನಿಬಾಯಿ, ಸಕ್ರಿಬಾಯಿ, ಜ್ಯೋತಿ, ಕಮ್ಲಿಬಾಯಿ, ದೇವಿಬಾಯಿ, ಸೋನಿ, ಶಾಂತಿಬಾಯಿ, ನಾಗಿಬಾಯಿ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದರು.