ಮಾ ೦೩ :- ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ದಿನೇ ದಿನೇ ಜೋರಾಗುತ್ತಿದ್ದು, ಅಧಿಕಾರಿಗಳ ಕ್ರಮಕ್ಕೂ ಡೋಂಟ್ ಕೇರ್ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ವಡಿಗೇರಾ ತಾಲ್ಲೂಕಿನ ಕಂಟಿ ತಾಂಡಾ ಬಳಿಯೇ ಮರಳು ದಂಧೆಕೋರರ ಆಟ ನಡೆಯುತ್ತಿದೆ. ಗೊಂದೆನೂರು ಗ್ರಾಮದಿಂದ ನಿರಂತರ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಸಾರ್ವಜನಿಕರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಲಭ್ಯವಾಗುತ್ತಿದ್ದರೂ ಪೊಲೀಸರ ನಿರ್ಲಕ್ಷ್ಯ?
ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅವರು ಅಕ್ರಮ ಮರಳು ಸಾಗಾಟ ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಿದರೂ, ಮರಳು ದಂಧೆಕೋರರು ಅದನ್ನು ಲೆಕ್ಕಿಸದೇ ತಮ್ಮ ಕ್ರಿಯಾಕಲಾಪ ಮುಂದುವರಿಸುತ್ತಿದ್ದಾರೆ. ಓವರ್ ಲೋಡ್ ಮರಳಿನಿಂದ ತುಂಬಿದ್ದ ಟಿಪ್ಪರ್ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಪೊಲೀಸ್ ಇಲಾಖೆಗೆ ಈ ಬಗ್ಗೆ ನಿರಂತರ ಮಾಹಿತಿ ದೊರಕುತ್ತಿದ್ದರೂ, ತಕ್ಕ ಮಟ್ಟದ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.
ಅರ್ಧ ದಾರಿಯಲ್ಲಿ ಮರಳು ಖಾಲಿ ಮಾಡಿದ ದಂಧೆಕೋರರು
ಅಕ್ರಮ ಮರಳು ಸಾಗಾಟದ ಬಗ್ಗೆ ದೀರ್ಘ ಕಾಲದಿಂದಲೂ ಸಾರ್ವಜನಿಕರಿಂದ ಅಸಮಾಧಾನದ ಸ್ವರ ಕೇಳಿ ಬರುತ್ತಿದ್ದು, ಇತ್ತೀಚೆಗೆ ಅಧಿಕಾರಿಗಳಿಗೆ ಧೀಡಿರ್ ಮಾಹಿತಿ ದೊರಕಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮುನ್ನವೇ, ಮರಳು ಸಾಗಾಟದ ಲಾರಿಗಳನ್ನು ಅಡ್ಡದಾರಿಯಲ್ಲಿ ನಿಲ್ಲಿಸಿ, ಓವರ್ ಲೋಡ್ ಇದ್ದ ಮರಳನ್ನು ಅಲ್ಲಿಯೇ ಖಾಲಿ ಮಾಡಿ ಪರಾರಿಯಾದ ಘಟನೆ ವರದಿಯಾಗಿದೆ.
ರಾಯಾಲಿಟಿಯುಳ್ಳ ಟಿಪ್ಪರ್ ಗೂ ಓವರ್ ಲೋಡ್..?
ಮೌಲ್ಯಯುತ ಮರಳು ದಂಧೆ ದಿನೇ ದಿನೇ ಬೂಮಿಯುತ್ತಿದ್ದು, ಅಧಿಕೃತವಾಗಿ ರಾಯಾಲಿಟಿ ಪಾವತಿಸಿರುವ ಟಿಪ್ಪರ್ ವಾಹನಗಳಲ್ಲಿಯೂ ಓವರ್ ಲೋಡ್ ಮರಳು ಸಾಗಾಟ ಮಾಡಲಾಗುತ್ತಿದೆ. ಇದರಿಂದಾಗಿ ರಸ್ತೆಗಳಿಗೆ ಹಾನಿಯಾಗುತ್ತಿರುವುದರ ಜೊತೆಗೆ ಅಪಘಾತಗಳ ಅಪಾಯವೂ ಹೆಚ್ಚಾಗಿದೆ.
ಪೊಲೀಸರ ಸಮ್ಮತಿ?.. ಭಾರಿ ಹಣದ ಲೆನ್-ದೆನ್?
ಅಕ್ರಮ ಮರಳುಗಾರಿಕೆ ಹಿಂದಿನ ಲೆನ್-ದೆನ್ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಓವರ್ ಲೋಡ್ ಮರಳು ಸಾಗಾಟದ ಬಗ್ಗೆ ಪೊಲೀಸರಿಗೂ ಮಾಹಿತಿ ಇದ್ದರೂ ಅವರು ಮೌನ ವಹಿಸಿರುವುದು, ಈ ದಂಧೆಯಲ್ಲಿ ಪೋಲೀಸರು ಕೂಡಾ ಪಾಲುದಾರರಾಗಿದ್ದಾರೆ ಎಂಬ ಅನುಮಾನಕ್ಕೆ ಕಾರಣವಾಗಿದೆ. ಅನೇಕ ಮರಳು ಲಾರಿಗಳಿಗೆ ಯಾವುದೇ ನಂಬರ್ ಪ್ಲೇಟ್ ಇಲ್ಲದೆ ಸಾಗಾಟ ಮಾಡಲಾಗುತ್ತಿದೆ, ಇದರಿಂದ ಈ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದನ್ನು ಅರ್ಥ ಮಾಡಿಕೊಳ್ಳಬಹುದು.
ಸಾರಿಗೆ ತಡೆಗಟ್ಟಲು ಸಾರ್ವಜನಿಕರ ಒತ್ತಾಯ!
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಈ ಅಕ್ರಮ ಮರಳು ಸಾಗಾಟ ತಡೆಯಲು ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ. ಸರಿಯಾದ ನಿಯಂತ್ರಣ ಇಲ್ಲದಿದ್ದರೆ ಪರಿಸರಕ್ಕೆ ತೀವ್ರ ಹಾನಿ ಸಂಭವಿಸುವುದು ಖಚಿತ. ಮರಳು ಕಳ್ಳತನ ನಿಲ್ಲಿಸಲು ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

