ಯಾದಗಿರಿ, ಫೆ. 18
ಈ ವಿವಾದಿತ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲಾ ಆವರಣದಲ್ಲಿ ಇರುವ ಬೋರ್‌ವೆಲ್ ಬಳಿ ಪಾಚಿಗಟ್ಟಿ ನಾರುತ್ತಿದ್ದ ಚರಂಡಿಯನ್ನು ಸ್ವಚ್ಛಗೊಳಿಸಲು ಮುಖ್ಯೋಪಾಧ್ಯಾಯ ಶರಣಪ್ಪ ಮಕ್ಕಳನ್ನು ಬಲವಂತ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, “ಮಕ್ಕಳ ಕೈಯಲ್ಲಿ ಪೆನ್ ಹಿಡಿಸಿ ಬರೆಯಿಸಬೇಕಾದ ಸ್ಥಳದಲ್ಲಿ ಇವರಿಂದ ಚರಂಡಿ ಸ್ವಚ್ಚಗೊಳಿಸಲು ಹೇಳಲಾಗುತ್ತಿದೆ. ಇದು ಖಂಡನೀಯ. ಈ ಸಮಸ್ಯೆಯನ್ನು ಪಂಚಾಯತ್ ಸದಸ್ಯರ ಗಮನಕ್ಕೆ ತರುವ ಬದಲು, ವಿದ್ಯಾರ್ಥಿಗಳನ್ನು ಬಳಸುವುದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ:
ಈ ಘಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಸ್ಥಳೀಯರು ಶಾಲೆಗೆ ಆಗಮಿಸಿ ಮುಖ್ಯೋಪಾಧ್ಯಾಯರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದರು. “ಶಾಲಾ ಮಕ್ಕಳು ಪಠ್ಯಪಾಠ ಕಲಿಯಬೇಕು, ಶುಚಿತ್ವ ಕೆಲಸ ಮಾಡೋದು ಅವರ ಜವಾಬ್ದಾರಿಯಲ್ಲ! ಸ್ವಚ್ಛತೆ ಕೆಲಸಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪುರಸಭಾ ಅಥವಾ ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ಇದನ್ನು ಸ್ವಚ್ಚಗೊಳಿಸಬಹುದಿತ್ತು,” ಎಂದು ಗ್ರಾಮಸ್ಥರು ಕಿಡಿಕಾರಿದರು.
ಹೆಡ್‌ಮಾಸ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹ:
ಈ ಘಟನೆಗೆ ಸಂಬಂಧಿಸಿದಂತೆ, ಕೆಲವು ಗ್ರಾಮಸ್ಥರು ಹಾಗೂ ಪೋಷಕರು ಮುಖ್ಯೋಪಾಧ್ಯಾಯ ಶರಣಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. “ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವ ಬದಲು ಈ ರೀತಿ ದುಡಿಸಿಕೊಳ್ಳುವುದು ಭಾರೀ ತಪ್ಪು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಘಟನೆಯನ್ನು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯೋಪಾಧ್ಯಾಯರ ವರ್ತನೆಯ ಕುರಿತು ತನಿಖೆಗೆ ಆದೇಶಿಸಿರುವುದಾಗಿ ಮೂಲಗಳು ತಿಳಿಸಿವೆ.