Mon. Jul 21st, 2025

ಶಹಾಪುರ: ಕೃಷಿ ಜಮೀನಿನಲ್ಲಿ ಐಷಾರಾಮಿ ಅನಧಿಕೃತ ಕಟ್ಟಡಗಳು – ಸರ್ಕಾರಕ್ಕೆ ಲಕ್ಷಾಂತರ ನಷ್ಟ!

ಶಹಾಪುರ: ಕೃಷಿ ಜಮೀನಿನಲ್ಲಿ ಐಷಾರಾಮಿ ಅನಧಿಕೃತ ಕಟ್ಟಡಗಳು – ಸರ್ಕಾರಕ್ಕೆ ಲಕ್ಷಾಂತರ ನಷ್ಟ!

ಶಹಾಪುರ, ಯಾದಗಿರಿ ಫೆ ೧೬:-

ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ಸರ್ವೇ ನಂಬರ್ 238/6 ರಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಪ್ರಕರಣ ಬೆಳಕಿಗೆ ಬಂದಿದೆ. ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಐಷಾರಾಮಿ ಮನೆಗಳು ಹಾಗೂ ಸ್ಟೋನ್ ಪಾಲಿಷಿಂಗ್ ಮತ್ತು ಕಟ್ಟಿಂಗ ಮಷೀನ್ ಕಾರ್ಖಾನೆ ಸ್ಥಾಪನೆಯಾಗಿದೆ. ಸರ್ಕಾರದ ಅನುಮತಿ ಇಲ್ಲದೆ ನಿರ್ಮಾಣಗೊಂಡಿರುವ ಈ ಕಟ್ಟಡಗಳಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವುದು ತಿಳಿದು ಬಂದಿದೆ.

ಅನಧಿಕೃತ ಕಟ್ಟಡಗಳ ಪಟ್ಟಿ:
ಶಿರವಾಳ ಗ್ರಾಮದಲ್ಲಿ 190 ಕ್ಕೂ ಹೆಚ್ಚು ಮನೆಗಳು ಯಾವುದೇ ದಾಖಲೆಗಳಿಲ್ಲದೆ ನಿರ್ಮಾಣವಾಗಿದ್ದು, ಇದರಿಂದ ಗ್ರಾಮ ಪಂಚಾಯಿತಿ ಹಾಗೂ ಸರಕಾರಿ ಬೊಕ್ಕಸಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಈ ಮನೆಗಳಿಗೆ ಕಟ್ಟಡ ಪರವಾನಗಿ ಇಲ್ಲ, ಗ್ರಾಮ ಪಂಚಾಯತಿ ಅನುಮತಿ ಕೂಡಾ ಪಡೆಯಲಾಗಿಲ್ಲ. ತೆರಿಗೆ ಪಾವತಿ ಮಾಡುವ ಪ್ರಶ್ನೆಯೇ ಇಲ್ಲ. ಇದರಿಂದ ಸರ್ಕಾರದ ಆದಾಯಕ್ಕೆ ದೊಡ್ಡ ಮಟ್ಟದ ಹೊಡೆತ ತಗುಲಿರುವುದು ಸ್ಪಷ್ಟವಾಗಿದೆ.

ಅಕ್ರಮ ಖರೀದಿ ಮತ್ತು ಮಾರಾಟದ ಆರೋಪ:
ಅನಧಿಕೃತ ಮನೆಗಳು ಕಾನೂನಾತ್ಮಕ ದಾಖಲೆಗಳಿಲ್ಲದೆ ಮಾರಾಟವಾಗುತ್ತಿದ್ದು, ಭೂಗಳ್ಳರ ಬಣ್ಣ ಬಣ್ಣದ ಮಾತುಗಳ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ. ಮೂಲತಃ ಬೇರೆ ಒಬ್ಬರ ಆಸ್ತಿಯನ್ನು ಇನ್ನಾರಿಗೋ ಮಾರಾಟ ಮಾಡಿ ಜನರಿಗೆ ‘ಮಕ್ಮಲ್ ಟೋಪಿ’ ಹಾಕುತ್ತಿರುವುದು ಸತ್ಯಾಂಶವಾಗಿ ಹೊರಬಂದಿದೆ. ಈ ತಂತ್ರಕ್ಕೆ ಸಿಕ್ಕು ಹಲವಾರು ಜನ ತಮ್ಮ ದುಡಿಯುವ ಹಣವನ್ನು ಕಳೆದುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

PDOಗೆ ಒತ್ತಾಯ:
ಗ್ರಾಮಸ್ಥರು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸಂಘಟನೆಗಳು PDO ಗೆ ಒತ್ತಾಯ ಮಾಡಿದ್ದು, 190 ಅನಧಿಕೃತ ಮನೆಗಳಿಗೆ ತೆರಿಗೆ ವಸೂಲಿ ಪ್ರಕ್ರಿಯೆ ಪ್ರಾರಂಭಿಸಬೇಕು. ಇದಲ್ಲದೆ, ಈ ಮನೆಗಳ ಪಟ್ಟು ಪರಿಶೀಲನೆ ನಡೆಸಿ, ಸೂಕ್ತ ದಾಖಲೆಗಳಿಲ್ಲದ ಮನೆಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಸಾಮಾಜಿಕ ಹೋರಾಟಗಾರರ ಆಗ್ರಹ:
ಈ ಅಕ್ರಮ ತಾಣಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರರು ಒತ್ತಾಯಿಸಿದ್ದಾರೆ. ಅನಧಿಕೃತವಾಗಿ ನಿರ್ಮಿಸಿರುವ ಮನೆಗಳು ಹಾಗೂ ಕಾರ್ಖಾನೆಗಳ ಮಾಲೀಕರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಸೂಕ್ತ ದಾಖಲೆಗಳ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಎಚ್ಚರಿಕೆ:
ಈ ಕುರಿತು ಗ್ರಾಮಸ್ಥರು ಹಾಗೂ ಹೋರಾಟಗಾರರು ಎಚ್ಚರಿಕೆ ನೀಡಿದ್ದು, ತಕ್ಷಣವೇ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಈ ಪ್ರಕರಣದಲ್ಲಿ ಯಾವುದೇ ಲೋಪ ಕಂಡು ಬಂದರೆ, ಪಂಚಾಯಿತಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಜನತೆ ಸಿದ್ಧರಾಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!