Tue. Jul 22nd, 2025

ರಾಜ್ಯದಲ್ಲಿ 30 ಲಕ್ಷ ನಿವೇಶನಗಳಿಗೆ ಬಿ–ಖಾತಾ: ತ್ವರಿತ ಅಭಿಯಾನಕ್ಕೆ ಸರ್ಕಾರದ ನಿರ್ಧಾರ

ರಾಜ್ಯದಲ್ಲಿ 30 ಲಕ್ಷ ನಿವೇಶನಗಳಿಗೆ ಬಿ–ಖಾತಾ: ತ್ವರಿತ ಅಭಿಯಾನಕ್ಕೆ ಸರ್ಕಾರದ ನಿರ್ಧಾರ

ಬೆಂಗಳೂರು ಜ ೨೮:-

ರಾಜ್ಯದ ಸ್ಥಳೀಯ ಸಂಸ್ಥೆಗಳ ನಗರ ವ್ಯಾಪ್ತಿಯಲ್ಲಿರುವ ಇ-ಖಾತಾ ಹೊಂದಿಲ್ಲದ 30 ರಿಂದ 32 ಲಕ್ಷ ಆಸ್ತಿಗಳಿಗೆ ಬಿ–ಖಾತಾ ನೀಡಲು ಕಂದಾಯ ಇಲಾಖೆ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೋಮವಾರ ಘೋಷಣೆ ಮಾಡಿದರು.

ಸೋಮವಾರ ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಿ–ಖಾತಾ ನೀಡುವ ಈ ಅಭಿಯಾನವನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಈ ಕುರಿತಂತೆ ಸರಕಾರದಿಂದ ಫೆಬ್ರವರಿ 10 ರೊಳಗೆ ಸುತ್ತೋಲೆ ಹೊರಡಿಸಲಾಗುವುದು.

55 ಲಕ್ಷ ನಿವೇಶನಗಳ ಪೈಕಿ 30 ಲಕ್ಷಕ್ಕೆ ದಾಖಲೆ ಇಲ್ಲ
ಬೆಂಗಳೂರು ಹೊರತುಪಡಿಸಿ ಇತರ ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ಒಟ್ಟಾರೆ 55 ಲಕ್ಷ ನಿವೇಶನಗಳಿವೆ. ಇವುಗಳಲ್ಲಿ 22 ಲಕ್ಷ ಸೈಟ್ ಮಾಲೀಕರು ಈಗಾಗಲೇ ಇ-ಖಾತಾಗಳನ್ನು ಪಡೆದಿದ್ದಾರೆ. ಆದರೆ, 30 ಲಕ್ಷಕ್ಕೂ ಹೆಚ್ಚು ನಿವೇಶನಗಳಿಗೆ ಯಾವುದೇ ದಾಖಲೆಗಳಿಲ್ಲ. ಈ ಸಮಸ್ಯೆಯನ್ನು ಒಮ್ಮೆಗೇ ಪರಿಹರಿಸಲು ಸರಕಾರವು ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.

ಅಭಿಯಾನ ಮಾದರಿಯಲ್ಲಿ ಬಿ–ಖಾತಾ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಬಿ–ಖಾತಾ ನೀಡುವ ಕಾರ್ಯವನ್ನು ಅಭಿಯಾನ ರೂಪದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಇ–ಪ್ರಾಪರ್ಟೀಸ್ ಅಡಿಯಲ್ಲಿ ಆಸ್ತಿಗಳನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆಯನ್ನು ಒದಗಿಸಲಾಗುವುದು. ಅಗತ್ಯ ದಾಖಲೆಗಳನ್ನು ಸಲ್ಲಿಸಿದವರು ಬಿ–ಖಾತಾ ಪಡೆಯಲು ಅರ್ಹರಾಗಲಿದ್ದಾರೆ.

ಅನಧಿಕೃತ ನಿವೇಶನಗಳಿಗೆ ಗಡಿ
ಅನಧಿಕೃತ ನಿವೇಶನಗಳ ಮೇಲೆ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದು, ಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ. ಬಿ–ಖಾತಾ ಪ್ರಕ್ರಿಯೆ ಪೂರ್ಣಗೊಂಡ ನಂತರ, ರಾಜ್ಯದಲ್ಲಿ ಇಂತಹ ಸ್ವತ್ತುಗಳ ನೋಂದಣಿಗೆ ಅವಕಾಶವಿರುವುದಿಲ್ಲ. ಮುಂದಿನ ದಿನಗಳಲ್ಲಿ ಎ–ಖಾತಾ ಮಾತ್ರ ಶಾಶ್ವತವಾಗಲಿದೆ ಎಂದು ಸಚಿವರು ವಿವರಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತರಣೆ
ನಗರ ವ್ಯಾಪ್ತಿಯ ಈ ಅಭಿಯಾನ ಪೂರ್ಣಗೊಂಡ ನಂತರ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುವುದು. ಸರ್ಕಾರವು ಈ ಪ್ರಕ್ರಿಯೆಯನ್ನು ಆಧುನಿಕ ಪದ್ದತಿಯಲ್ಲಿ ಚುರುಕುಗೊಳಿಸಲು ನಿರ್ಧರಿಸಿದೆ.

ಈ ಯೋಜನೆಯಿಂದ ನೂರಾರು ಸೈಟ್ ಮಾಲೀಕರಿಗೆ ಸೂಕ್ತ ದಾಖಲೆಗಳನ್ನು ಹೊಂದುವ ಅವಕಾಶ ದೊರೆಯಲಿದ್ದು, ಅನಧಿಕೃತ ನಿವೇಶನಗಳ ನಿರ್ವಹಣೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬರುವುದು.

 

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!