ಬೆಂಗಳೂರ (ಡಿ ೦೧):- ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯೇಂದ್ರ ಆಪ್ತ ಬಣದ ಆಕ್ರೋಶ ತೀವ್ರಗೊಂಡಿದ್ದು, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಹೈಕಮಾಂಡ್‌ಗೆ ಒತ್ತಾಯ ಮಾಡಲು ಶಕ್ತಿ ಪ್ರದರ್ಶನ ನಡೆಸಲಾಗಿದೆ. ಈ ಸಂಬಂಧ ಗುರುವಾರ (ನವೆಂಬರ್ 30) ಚಾಮುಂಡಿ ಬೆಟ್ಟದಲ್ಲಿ ವಿಶೇಷ ಶಪಥ ಮತ್ತು ಪೂಜೆ ನಡೆಸಿ, 30ಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ಘೋಷಿಸಿದರು.
ಚಾಮುಂಡಿ ಬೆಟ್ಟದಲ್ಲಿ ಶಕ್ತಿ ಪ್ರದರ್ಶನದ ನಂತರ, ಮೈಸೂರಿನಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ವಿಜಯೇಂದ್ರ ಬಣದ ಪ್ರಮುಖರು ಯತ್ನಾಳ್ ವಿರುದ್ಧ ಒಗ್ಗಟ್ಟಿನ ಸಂದೇಶವನ್ನು ಹೈಕಮಾಂಡ್‌ಗೆ ಕಳುಹಿಸಲು ತೀರ್ಮಾನಿಸಿದರು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಗಲಾಟೆಯೂ ಸಂಭವಿಸಿತು. ಬಣದ ಕಾರ್ಯಕರ್ತರು “ಯತ್ನಾಳ್ ಉಚ್ಚಾಟನೆ ಪಕ್ಷದ ಹಿತ” ಎಂಬ ಘೋಷಣೆಗಳನ್ನು ಕೂಗಿ, ಪಕ್ಷದ ಒಳಗೇ ಆತಂಕ ಉಂಟುಮಾಡಿದರು.
ಯಡಿಯೂರಪ್ಪ ನಿವಾಸದಲ್ಲಿ ಮುಂದುವರೆದ ಚರ್ಚೆ:
ಈ ಬೆಳವಣಿಗೆಯ ನಂತರ ಇಂದು (ಡಿಸೆಂಬರ್ 1) ಬೆಳಗಿನ ಜಾವ ವಿಜಯೇಂದ್ರ ಬಣದ ಪ್ರಮುಖರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು. ಹಿರಿಯ ಮುಖಂಡರಾದ ಎಂ.ಪಿ. ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗವಹಿಸಿದರು.