Tue. Jul 22nd, 2025

ಆಹಾರ ಸುರಕ್ಷತೆಗೆ ಸರ್ಕಾರದ ಕಠಿಣ ಕ್ರಮ: ರಾಜ್ಯಾದ್ಯಾಂತ ವಿಶೇಷ ತಪಾಸಣೆ

ಆಹಾರ ಸುರಕ್ಷತೆಗೆ ಸರ್ಕಾರದ ಕಠಿಣ ಕ್ರಮ: ರಾಜ್ಯಾದ್ಯಾಂತ ವಿಶೇಷ ತಪಾಸಣೆ

ಆ ೩೦:

ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ರಾಜ್ಯಾದ್ಯಂತ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ಎರಡು ದಿನಗಳ ವಿಶೇಷ ಆಂದೋಲನವನ್ನು ಆರಂಭಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ಮತ್ತು ಆಹಾರ ಸುರಕ್ಷತಾ ಸಚಿವ ದಿನೇಶ್ ಗುಂಡೂರಾವ್, ಮಂಗಳೂರಿನಲ್ಲಿ ಮಾತನಾಡಿ, “ಆಹಾರ ಸುರಕ್ಷತಾ ಇಲಾಖೆ ಇಡೀ ರಾಜ್ಯದಲ್ಲಿ ವ್ಯಾಪಕ ಪರಿಶೀಲನೆ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದುವರೆಗೆ ಈ ಇಲಾಖೆಯ ಕಾರ್ಯಗಳ ಬಗ್ಗೆ ಜನರಿಗೆ ಅಷ್ಟು ತಿಳಿಯಲಿಲ್ಲ, ಆದರೆ ನಮ್ಮ ಸರ್ಕಾರ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದೆ,” ಎಂದು ಹೇಳಿದರು.

ಸಚಿವರು, “ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ತಯಾರಾಗುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತೀ ತಿಂಗಳು ಕೆಲವೊಂದು ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿ, ಅವುಗಳ ಮೇಲೆ ವಿಶೇಷ ತಪಾಸಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಾಂಸದಂಗಡಿ ಮತ್ತು ಇತರ ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡುತ್ತಿದ್ದೇವೆ,” ಎಂದು ವಿವರಿಸಿದರು.

ಅವರು ಮುಂದುವರಿಸಿ, “ಆಗಸ್ಟ್‌ ತಿಂಗಳಲ್ಲಿ ಕೇಕ್ ಮತ್ತು ಖೋವಾ ಆಹಾರ ಪದಾರ್ಥಗಳ ಪರೀಕ್ಷೆಯನ್ನು ಕೈಗೊಂಡಿದ್ದೇವೆ. ಅದರ ವರದಿ ಇನ್ನಷ್ಟೇ ಬರಬೇಕಿದೆ. ಮುಂದಿನ ತಿಂಗಳು ಬೇರೆ ತಿನಿಸುಗಳನ್ನೂ ಪರೀಕ್ಷೆ ಮಾಡಲಿದ್ದೇವೆ,” ಎಂದು ಹೇಳಿದರು.

ಆಹಾರ ಉತ್ಪನ್ನಗಳಲ್ಲಿ ಕೆಮಿಕಲ್ ಬಳಕೆ, ಬಣ್ಣ ಬೆರೆಸುವುದು, ಮತ್ತು ಆಹಾರದಲ್ಲಿ ಅನಾರೋಗ್ಯಕರ ಪದಾರ್ಥಗಳ ಸೇರ್ಪಡೆ ವಿಚಾರದಲ್ಲಿ ದಿನೇಶ್ ಗುಂಡೂರಾವ್ ಸಚಿವರ ನೇತೃತ್ವದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ ಬೆಂಗಳೂರಿನ ವಿಜಯನಗರದ ಫುಡ್‌ ಸ್ಟ್ರೀಟ್‌ನಲ್ಲಿ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು, ಅಲ್ಲಿನ ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ಕ್ರಮ ಕೈಗೊಂಡಿದ್ದರು.

“ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ಇದನ್ನು ಜನರಿಗೆ ತಿಳಿಸಲು ನಾವು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ,” ಎಂದು ಸಚಿವರು ಅಭಿಪ್ರಾಯಪಟ್ಟರು.

ಆಗಸ್ಟ್ 30 ಮತ್ತು 31ರಂದು ಕರ್ನಾಟಕದಾದ್ಯಂತ ನಡೆಯುವ ಈ ವಿಶೇಷ ಕಾರ್ಯಾಚರಣೆಯಲ್ಲಿ, ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಮಾರಾಟವಾಗುವ ಮಾಂಸ, ಮೀನು, ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟವನ್ನು ತಪಾಸಣೆ ಮಾಡುವುದಾಗಿ ತಿಳಿಸಲಾಗಿದೆ. ಕಾನೂನುಬಾಹಿರವಾಗಿ, ಜನರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!