ಜು ೦೯:ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಇನ್ನೂ ಪಾವತಿಯಾಗದೇ ಇರುವುದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು, ಈ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಸ್ಪಲ್ಪ ತಡವಾಗಿದೆ. ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಜುಲೈ ತಿಂಗಳದ್ದು ಇದೇ 15ರೊಳಗೆ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕಾಂಗ್ರೆಸ್ ಜಾರಿ ಮಾಡಿರುವ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದು. ಪ್ರತಿ ತಿಂಗಳು ಮಹಿಳೆಯರ ಅಕೌಂಟ್‌ಗೆ 2000 ರೂಪಾಯಿ ಜಮಾ ಮಾಡುವ ಯೋಜನೆ ಇದಾಗಿದೆ. ಎರಡು ತಿಂಗಳ ಹಣ ಒಂದೇ ಕಂತಿನಲ್ಲಿ ಪಾವತಿ ಮಾಡದೇ ಇದ್ದರೂ, ಒಂದು ವಾರದ ಅಂತರದಲ್ಲಿ ಎರಡು ಬಾರಿ ಹಣ ಜಮೆಯಾಗುತ್ತದೆ ಎಂದು ಸಚಿವೆ ಭರವಸೆ ನೀಡಿದ್ದು ಮಹಿಳೆಯರ ಖುಷಿ ಹೆಚ್ಚಿಸಿದೆ. ಗೃಹಲಕ್ಷ್ಮಿ ಜೂನ್ ಕಂತಿನ ಹಣ ಬಿಡುಗಡೆ ಮಾಡದೇ ಇರುವುದಕ್ಕೆ ವಿಪಕ್ಷಗಳು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದವು.
ಉಚಿತ ಭರವಸೆಗಳನ್ನು ಈಡೇರಿಸಲು ಹೋಗಿ ಸರ್ಕಾರ ದಿವಾಳಿಯಾಗಿದ್ದು, ಯೋಜನೆಗಳನ್ನು ಮುಂದುವರೆಸುವುದು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಟೀಕಿಸಿದ್ದರು. ಏನೇ ಆದರೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದು, ಸರ್ಕಾರ ಇದಕ್ಕೆ ಹಣವನ್ನು ಹೊಂದಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದೆ. ಈಗ ಗೃಹಲಕ್ಷ್ಮಿ ಯೋಜನೆ ಎರಡು ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆಗೆ ಬರಲಿದೆ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.